ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ಬ್ರೇಕ್
ಶೇ.50ರ ಮಿತಿ ಮೀರಿದ ಮೀಸಲಾತಿ ಕಾಯ್ದೆಯ ಸೆಕ್ಷನ್ 3, 4 ಅಸಂವಿಧಾನಿಕ ಎಂದು ಘೋಷಣೆ
ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಸವರಾಜ ಬೊಮ್ಮಾಯಿ ಒತ್ತಾಯ; ಮೀಸಲಾತಿ ನೀತಿಯ ಮುಂದಿನ ನಡೆ ಮೇಲೆ ಎಲ್ಲರ ಗಮನ
ಬೆಂಗಳೂರು: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ)SC ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ)ST ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್‌ನ ತೀರ್ಪಿನಿಂದ ಹಿನ್ನಡೆಯಾಗಿದೆ.

2022ರಲ್ಲಿ ಜಾರಿಗೆ ತರಲಾಗಿದ್ದ ಮೀಸಲಾತಿ ಕಾಯ್ದೆಯ ಸೆಕ್ಷನ್ 3 ಮತ್ತು 4 ಅನ್ನು ಅಸಂವಿಧಾನಿಕ ಎಂದು ಘೋಷಿಸಿರುವ ನ್ಯಾಯಾಲಯ, ಅವುಗಳನ್ನು ರದ್ದುಗೊಳಿಸಿದೆ.
ಈ ತೀರ್ಪಿನಿಂದ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದ್ದ ಸರ್ಕಾರದ ನಿರ್ಧಾರ ಕಾನೂನು ಪ್ರಶ್ನೆಗಳನ್ನು ಎದುರಿಸುವಂತಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ( Educational Institution)ಪ್ರವೇಶ ಹಾಗೂ ರಾಜ್ಯ ಸರ್ಕಾರಿ ಸೇವೆಗಳ ನೇಮಕಾತಿಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ರೂಪಿಸಲಾಗಿದ್ದ ಈ ಕಾಯ್ದೆ 2023ರ ಜನವರಿ 12ರಂದು ಜಾರಿಗೆ ಬಂದಿತ್ತು.
ಇದೀಗ ಹೈಕೋರ್ಟ್‌ನ(High Court) ಆದೇಶವು ರಾಜ್ಯದ ಮೀಸಲಾತಿ ನೀತಿ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು( Vibhu Bakhru)ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ(K.S. Hemalekha) ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ಮಹತ್ವದ ಆದೇಶ ನೀಡಿದೆ.
ಇತರೆ ಹಿಂದುಳಿದ ವರ್ಗಗಳ (ಒಬಿಸಿ)OBC ಮೀಸಲಾತಿಯನ್ನು ಶೇ.32ರಷ್ಟೇ ಉಳಿಸಿಕೊಂಡಿದ್ದರೂ, ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳದಿಂದ ರಾಜ್ಯದ ಒಟ್ಟಾರೆ ಮೀಸಲಾತಿ ಪ್ರಮಾಣವು ಶೇ.50ರ ಮಿತಿಯನ್ನು ಮೀರಿತ್ತು.
ಇದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಪ್ರಮುಖವಾಗಿ ಪರಿಗಣಿಸಿದೆ.
ಸಂವಿಧಾನದ 14 ಮತ್ತು 15ನೇ ವಿಧಿಗಳಿಗೆ ವಿರುದ್ಧವಾಗಿರುವ ಕಾರಣ ಸೆಕ್ಷನ್ 3ರ ಸಂಬಂಧಿತ ಭಾಗವನ್ನು ಹಾಗೂ 14 ಮತ್ತು 16ನೇ ವಿಧಿಗಳನ್ನು ಉಲ್ಲಂಘಿಸುವ ಕಾರಣ ಸೆಕ್ಷನ್(Section) 4 ಅನ್ನು ಅಸಂವಿಧಾನಿಕ ಎಂದು ಘೋಷಿಸಲಾಗಿದೆ.
ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಲು ಅಸಾಧಾರಣ ಪರಿಸ್ಥಿತಿಗಳಲ್ಲಿ ಬಲವಾದ ಕಾರಣಗಳನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕೇವಲ ಸಮುದಾಯಗಳ ಜನಸಂಖ್ಯೆ ಹೆಚ್ಚಿರುವುದು ಅಥವಾ ಸರ್ಕಾರಿ ಉದ್ಯೋಗಗಳಲ್ಲಿ(Government Job) ಅವರ ಪ್ರಾತಿನಿಧ್ಯ ಕಡಿಮೆಯಿರುವುದು ಮಾತ್ರ ಮೀಸಲಾತಿಯ ಮಿತಿಯನ್ನು ಮೀರಲು ಸಾಕಷ್ಟು ಕಾರಣವಾಗುವುದಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಮೀಸಲಾತಿ ಹೆಚ್ಚಳದ ಪರವಾಗಿ ಹಲವು ವಾದಗಳನ್ನು ಮಂಡಿಸಿತ್ತು.
ರಾಜ್ಯದ ಜನಸಂಖ್ಯೆಯಲ್ಲಿ ಶೇ.90ಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರುವುದರಿಂದ, ಮೀಸಲಾತಿಯ ಪ್ರಮಾಣವು ಅವರ ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂದು ಸರ್ಕಾರ ವಾದಿಸಿತ್ತು.
ಅಲ್ಲದೆ, ಸಂವಿಧಾನದ 245 ಮತ್ತು 246ನೇ ವಿಧಿಗಳು ರಾಜ್ಯ ಶಾಸಕಾಂಗಕ್ಕೆ(Legislature) ಕಾನೂನು ರೂಪಿಸುವ ಅಧಿಕಾರ ನೀಡುತ್ತವೆ ಎಂಬ ಅಂಶವನ್ನೂ ಪ್ರಸ್ತಾಪಿಸಿತ್ತು. ಆದರೆ, ಶಾಸಕಾಂಗಕ್ಕೆ ಅಧಿಕಾರವಿದೆ ಎಂಬ ಕಾರಣಕ್ಕೆ ಸಂವಿಧಾನದ ಇತರ ನಿಯಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ರಾಷ್ಟ್ರೀಯ ಆಯೋಗಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸುವುದು ಕಡ್ಡಾಯ ಎಂದು ಪೀಠ ಹೇಳಿದೆ.
ಸಂವಿಧಾನದ 338(9) ಮತ್ತು 338ಎ(9)ನೇ ವಿಧಿಗಳ ಅಡಿಯಲ್ಲಿ ಸಂಬಂಧಿತ ಆಯೋಗಗಳ ಅಭಿಪ್ರಾಯ ಪಡೆಯುವ ಅಗತ್ಯವಿದೆ.
ಕಾಯ್ದೆ ಜಾರಿಗೆ ಬಂದ ಹಲವು ವರ್ಷಗಳ ಬಳಿಕ ಪತ್ರ ಬರೆಯುವುದನ್ನು ಪೂರ್ವ ಸಮಾಲೋಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸರ್ಕಾರವು 2025ರ ಡಿಸೆಂಬರ್ 10 ಮತ್ತು 2026ರ ಜನವರಿ 20ರಂದು ಆಯೋಗಗಳಿಗೆ ಪತ್ರ ಬರೆದಿದ್ದರೂ, ಈ ಕ್ರಮವು ಕಾಯ್ದೆ ಜಾರಿಯಾದ ನಂತರ ನಡೆದಿತ್ತು ಎಂಬ ಅಂಶವನ್ನೂ ನ್ಯಾಯಪೀಠ ಗಮನಿಸಿದೆ.
ಇನ್ನು, ನಾಗಮೋಹನ್ ದಾಸ್ ಆಯೋಗದ ವರದಿ ಮತ್ತು ರತ್ನಪ್ರಭಾ(Ratnaprabha) ಸಮಿತಿಯ ವರದಿಯ ಆಧಾರದಲ್ಲಿನ ಮೀಸಲಾತಿ ನಿರ್ಧಾರಗಳ ಕುರಿತು ನ್ಯಾಯಾಲಯ ತನ್ನ ಅಭಿಪ್ರಾಯವನ್ನು ದಾಖಲಿಸಿದೆ.
ಕೆಲವು ಸಮುದಾಯಗಳಿಗೆ ಮೀಸಲಾತಿಯ ಪ್ರಯೋಜನಗಳು ಸಮರ್ಪಕವಾಗಿ ತಲುಪಿಲ್ಲ ಎಂಬ ಅಂಶವು ಆಂತರಿಕ ಮೀಸಲಾತಿಗೆ ಆಧಾರವಾಗಬಹುದಾದರೂ, ಒಟ್ಟಾರೆ ಮೀಸಲಾತಿಯ ಶೇ.50ರ ಮಿತಿಯನ್ನು ಮೀರುವುದಕ್ಕೆ ಅದೊಂದೇ ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ನಿರ್ದಿಷ್ಟ ಸಮುದಾಯಗಳ ಜನಸಂಖ್ಯೆಯ ಪ್ರಮಾಣ ಮತ್ತು ಅವರಿಗೆ ದೊರೆಯುತ್ತಿರುವ ಸರ್ಕಾರಿ ಉದ್ಯೋಗಗಳಲ್ಲಿನ ಪ್ರಾತಿನಿಧ್ಯದ ನಡುವಿನ ವ್ಯತ್ಯಾಸವನ್ನು ಮಾತ್ರ ಆಧರಿಸಿ ಅಸಾಧಾರಣ ಪರಿಸ್ಥಿತಿಯಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮೀಸಲಾತಿ ಪ್ರಮಾಣ ಹೆಚ್ಚಿಸಿದಾಗ ಸಾಮಾನ್ಯಅರ್ಹತೆಯ (of eligibility)ಅಭ್ಯರ್ಥಿಗಳಿಗೆ ಲಭ್ಯವಾಗುವ ಅವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಹೀಗಾಗಿ, ಮೀಸಲಾತಿ ನೀತಿಯನ್ನು ರೂಪಿಸುವಾಗ ಸಾಮಾಜಿಕ ನ್ಯಾಯದ ಉದ್ದೇಶದ ಜೊತೆಗೆ ಸಂವಿಧಾನದ ಸಮಾನತೆಯ ತತ್ವ ಮತ್ತು ಕಾನೂನುಬದ್ಧ ಮಿತಿಗಳನ್ನೂ ಪಾಲಿಸಬೇಕೆಂಬ ಸಂದೇಶ ಈ ತೀರ್ಪಿನಲ್ಲಿ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬೊಮ್ಮಾಯಿ ಆಗ್ರಹ: ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಬಿಜೆಪಿ (BJP)ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ವಿರುದ್ಧದ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಸರ್ಕಾರದ ಅವಧಿಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯ ಆಧಾರದ ಮೇಲೆ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಕುರಿತು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ಮಸೂದೆ ಅಂಗೀಕರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಮೀಸಲಾತಿ ಹೆಚ್ಚಳದ ಉದ್ದೇಶವನ್ನು ಬೆಂಬಲಿಸಿರುವ ಬೊಮ್ಮಾಯಿ, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದಿದ್ದರೆ ತಾವೇ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ಕರ್ನಾಟಕ ಹೈಕೋರ್ಟ್‌ನ ಈ ತೀರ್ಪು ರಾಜ್ಯದ ಮೀಸಲಾತಿ ನೀತಿಗೆ ಸಂಬಂಧಿಸಿದಂತೆ ಮಹತ್ವದ ಕಾನೂನು ಬೆಳವಣಿಗೆಯಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುವ ಕಾನೂನು ಕ್ರಮಗಳು ಮತ್ತು ಸುಪ್ರೀಂ ಕೋರ್ಟ್‌ನ(Supreme Court) ನಿರ್ಧಾರವು ಮೀಸಲಾತಿ ಹೆಚ್ಚಳದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಇದನ್ನು ಓದಿ:https://www.facebook.com/share/v/1JtgP1gbdU/