Visit Channel

ಹಿಜಾಬ್ vs ಕೇಸರಿ! ವಿವಾದ ಹಿಂದೆ ಕಾಣದ ಕೈಗಳ ಕುತಂತ್ರವಿದೆಯಾ?

Untitled design (1)

ಕಳೆದ ಕೆಲವು ದಿನಗಳಿಂದ ಸಾಕಷ್ಟು ವಿವಾದವನ್ನು ಎಬ್ಬಿಸಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ವಿಷಯ ವಸ್ತುವೇ ಈ `ಹಿಜಾಬ್’
ಶಾಲೆ ಅಥವಾ ಕಾಲೇಜು ಎಂಬುವುದು ಯಾವುದೇ ರಾಜಕೀಯ, ಜಾತಿ, ಧರ್ಮ ಇವುಗಳನ್ನೆಲ್ಲ ಮೀರಿದ ಸರ್ವ ಧರ್ಮ ಜ್ಞಾನ ದೇಗುಲ. ಆದರೆ ಪೋಷಕರ ಒತ್ತಾಯವೋ, ರಾಜಕೀಯ ಪಕ್ಷಗಳ ದುರ್ಬಳಕೆಯೋ ಅಥವಾ ಸಂಘಟನೆಗಳ ಪ್ರತಿಷ್ಠೆಗೋ ಇಂದು ‘ಹಿಜಾಬ್’ ಎನ್ನವುದು ಬಿಡಿಸಲಾಗದಂತಹ ಕಗ್ಗಂಟಾಗಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಹಿಜಾಬ್ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮೊದಲಿಗೆ ಉಡುಪಿಯಲ್ಲಿ ಆರಂಭವಾದ ಹಿಜಾಬ್ ಕಲಹ ನಂತರದಲ್ಲಿ ಮಲೆನಾಡಿನ ಹಲವು ಜಿಲ್ಲೆಗಳಿಗೂ ಈ ಕಿಚ್ಚು ಹಬ್ಬಿತು . ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದರ ಪ್ರಭಾವ ಬೀರ ತೊಡಗಿತು.


ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯದ ಜೊತೆ ಬರಲು ಆರಂಭಿಸಿದರು. ಇದು ಎಲ್ಲೋ ಒಂದು ಕಡೆ ಕೋಮು ಸಂಘರ್ಷಕ್ಕೆ ಕಾರಣವಾಗಿರುವುದಂತೂ ನಿಜ. ಬರೀ ಹಿಜಾಬ್ ಮತ್ತು ಕೇಸರಿ ಕಾಳಗ ವಸ್ತ್ರಕ್ಕೆ ಸೀಮಿತವಾಗದೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು, ವಿಷಾದನೀಯವೇ ಸರಿ. ಆದರೂ ಈ ವಿವಾದ ತಣ್ಣಗಾಗದೇ ನಾವು ಹಿಜಾಬ್ ಧರಿಸಿಯೇ ಕಾಲೇಜಿಗೆ ಹಾಜರಾಗುತ್ತೇವೆ ಎಂದು ಉಡುಪಿಯ ವಿಧ್ಯಾರ್ಥಿನಿಯರು ಕಾನೂನು ಹೋರಾಟಕ್ಕೂ ಇಳಿದಿದ್ದು ,ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


ಕೇಸರಿ ಮತ್ತು ಹಿಜಾಬ್ ವಿವಾದ ಇದೇ ಮೊದಲಲ್ಲ :


ಹಿಜಾಬ್ ವಿವಾದ ಇದೇ ಮೊದಲಲ್ಲ. ಸುಮಾರು 3 ವರ್ಷಗಳ ಹಿಂದೆಯೂ ಕೂಡ ಮುಖ್ಯವಾಗಿ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ವಿವಾದ ಪ್ರತಿಧ್ವನಿಸಿತ್ತು. ಆ ಸಮಯದಲ್ಲಿ ಕಾಲೇಜು ಆಡಳಿತ ಮಂಡಳಿಗಳೇ ಆ ವಿವಾದವನ್ನು ಬಗೆ ಹರಸಿ ಕಾಲೇಜು ಒಳಗೆ ಹಿಜಾಬ್ ಧರಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಹಿನ್ನೆಲೆಯಲ್ಲಿ ಆ ವಿವಾದ ಅಲ್ಲಿಗೆ ತಣ್ಣಗಾಗಿತ್ತು. ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಉಡುಪಿ ವಿದ್ಯಾರ್ಥಿನಿಯರು. ವಿದ್ಯಾರ್ಥಿನಿಯರಿಗೆ ವಿದ್ಯಾರ್ಜನೆಗಿಂತ ಹಿಜಾಬ್ ಮುಖ್ಯವಾಗಿದೆ. ಅವರು ಕೊಟ್ಟ ಕಾರಣ ನೋಡುವುದಾದರೆ ‘ಇದು ಮಹಿಳಾ ಕಾಲೇಜ್ ಆದರೂ ಇಲ್ಲಿ ಪುರುಷ ಪ್ರಾಧ್ಯಪಕರಿದ್ದಾರೆ. ಅದೂ ಅಲ್ಲದೆ ಕಾರ್ಯಕ್ರಮಗಳು ಇದ್ದಾಗ ಪುರುಷ ಅತಿಥಿಗಳು ಕಾಲೇಜಿಗೆ ಬರುತ್ತಾರೆ ಅವರ ಮುಂದೆ ನಾವು ಹಿಜಾಬ್ ಇಲ್ಲದೆ ಓಡಾಡುವಂತಿಲ್ಲ ಹಾಗಾಗಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂಬುದು ಅವರ ವಾದವಾಗಿದೆ.

ಈ ಹಿಂದೆ ಹಿಜಾಬ್ ಮತ್ತು ಕೇಸರಿ ವಿವಾದ ಉಂಟಾದಾಗ ಅದು ಕಾಲೇಜಿನಲ್ಲೇ ಬಗೆಹರಿದಿತ್ತು. ಆದರೆ ಈಗ ಈ ವಿವಾದ ಒಂದು ಹೆಜ್ಜೆ ಮುಂದೆ ಹೋಗಿ ಕೋರ್ಟ್ ಮೆಟ್ಟಿಲೇರಿರುವುದು ವಿಪರ್ಯಾಸವೇ ಸರಿ. ಕಾಲೇಜಿನಲ್ಲಿ ಬಗೆ ಹರಿಯದ ಸಮಸ್ಯೆ ಇದೀಗ ಸರ್ಕಾರ ಆದೇಶವನ್ನೂ ಕೂಡ ಮೀರಿ ಕೋರ್ಟ್ಗೆ ಹೋಗಿದೆ ಎಂದರೆ ಇದಕ್ಕೆ ಸರ್ಕಾರದ ಅಸಮರ್ಥತೆ ಕಾರಣವಾಗಿರಬಹುದು ಎಂಬ ಸಂಶಯ ಮೂಡುವುದಂತೂ ಸತ್ಯ.


ವಿವಾದಕ್ಕೆ ರಾಜಕೀಯದ ಟಚ್ :


ಕಳೆದ ಕೆಲವು ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಉಡುಪಿಯಲ್ಲಿ ರಾಜಕೀಯ ಸದ್ದು ಮಾಡುತ್ತಿರುವುದಂತೂ ಸತ್ಯ. ಈ ಬಗ್ಗೆ ಕೆಲವರು ಅವರದ್ದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು , ಕಾಪು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ SDPI ಮೂರು ಸ್ಥಾನಗೆದ್ದ ಮರುದಿನದಿಂದಲೇ ಉಡುಪಿಯಲ್ಲಿ ಈ ಹಿಜಾಬ್ ವಿವಾದ ಸೃಷ್ಟಿಯಾಗಿದೆ. ಎಸ್ಡಿಪಿಐ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಆರೋಪಿಸಿದ್ದಾರೆ. ಇತ್ತ ಮುಸ್ಲಿಂ ಸಂಘಟನೆ ಜಮಾತ್ ಅವರ ಪ್ರಕಾರ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಅದು ಅವರ ಹಕ್ಕನ್ನು ಕಿತ್ತುಕೊಂಡಂತೆ ಹಾಗೂ ಅದು ಅವರ ಶೈಕ್ಷಣಿಕ ಬದುಕಿನ ಜೊತೆ ಆಟವಾಡುವ ಪ್ರಕ್ರಿಯೆಯಾಗಿದೆ ಎಂದು ಜಮಾತ್ ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿವೆ.


ಕೇರಳದಲ್ಲೂ ಹಿಜಾಬ್ಗೆ ಅವಕಾಶ ನೀಡದ ಸರ್ಕಾರ :


ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್ಪಿಸಿ) ಯೋಜನೆಯಲ್ಲಿ ಹಿಜಾಬ್ ಮತ್ತು ಪೂರ್ಣ ತೋಳಿನ ಉಡುಪನ್ನು ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಮ್ ವಿದ್ಯಾರ್ಥಿನಿಯೊಬ್ಬಳು ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಮನವಿಯನ್ನು ಮಾನ್ಯ ಮಾಡಿದರೆ ಎಸ್ಪಿಸಿಯ ಜಾತ್ಯಾತೀತ ನಿಲುವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯ ಸಮವಸ್ತ್ರದಲ್ಲಿ ಪ್ರತ್ಯೇಕತೆ ತರುವುದು ಸರಿಯಲ್ಲ. ಈ ಸಮವಸ್ತ್ರವನ್ನು ಧರಿಸಲು ಇಷ್ಟವಿಲ್ಲದವರು ಎಸ್ಪಿಸಿಯನ್ನು ಸೇರಬಾರದು. ಎಸ್ಪಿಸಿಗೆ ಸೇರಿದ ಬಳಿಕ ಈಗಾಗಲೇ ಸಿದ್ಧಪಡಿಸಲಾಗಿರುವ ಸಮವಸ್ತ್ರವನ್ನು ಧರಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಸಮವಸ್ತ್ರದೊಂದಿಗೆ ಧಾರ್ಮಿಕ ವಿಷಯಗಳನ್ನು ಸಂಯೋಜಿಸಿದರೆ ಮುಂದೆ ಇದೇ ರೀತಿಯ ಬೇಡಿಕೆ ಬೇರೆ ವಿಭಾಗಗಳಲ್ಲಿಯೂ ಬರಬಹುದು. ಇದರಿಂದಾಗಿ ಜಾತ್ಯಾತೀತ ತತ್ವಕ್ಕೆ ಭಂಗವಾಗುತ್ತದೆ ಎಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.


ವಿಧಾನ ಸೌಧ ಎಂಬ ದೇಗುಲದಲ್ಲಿ ‘ಪೂಜೆ ಪುನಸ್ಕಾರ’:


ಸರ್ಕಾರಿ ಕೆಲಸ ದೇವರ ಕೆಲಸ ಎಂದು ಜನರನ್ನು ನಂಬಿಸಿ ವಿಧಾನಸೌಧಕ್ಕೆ ಹೋಗುವ ಜನಪ್ರತಿನಿಧಿಗಳು ಅಲ್ಲಿ ಅವರ ಕಚೇರಿಯಲ್ಲಿ ವಾಸ್ತು ದೋಷ, ಆ ದೋಶ, ಈ ದೋಷ ಎಂದು ನೆಪ ಹೇಳಿ ಜನಸಾಮಾನ್ಯರ ತೆರಿಗೆಯಲ್ಲಿ ಆದ್ದೂರಿಯಾಗಿ ಪೂಜೆ ಮಾಡಿಸಿ ಸರ್ವಧರ್ಮದ ನೆಲೆಯಾಗಬೇಕಿದ್ದ ವಿಧಾನಸೌಧವನ್ನು ಯಾವುದೋ ಒಂದು ಧರ್ಮದ ಕಚೇರಿ ಎಂಬ ರೀತಿಯಲ್ಲಿ ಬಿಂಬಿಸುವುದು ಎಷ್ಟರ ಮಟ್ಟಿಗೆ ಸರಿ.? ಒಟ್ಟಿನಲ್ಲಿ ರಾಜಕಾರಣಿಗಳಿಂದ ಆರಂಭವಾದ ಈ ಆಡಂಬರಗಳು ಇಂದು ಶೈಕ್ಷಣಿಕ ಸಂಸ್ಥೆಗಳಿಗೂ ಕಾಲಿಟ್ಟಿದೆ. ಇದೆ ರೀತಿ ಮುಂದುವರೆದಲ್ಲಿ ಮುಂದೊಂದು ದಿನ ಹಿಂದೂಗಳಿಗೆ ಬೇರೆ ಕಾಲೇಜ್, ಮುಸ್ಲಿಂ ವಿದ್ಯಾರ್ಥಿಗಳಿಗೆ ಬೇರೆ ಕಾಲೇಜ್ ಹಾಗೂ ಕ್ರೈಸ್ತರಿಗೆ ಬೇರೆ ಕಾಲೇಜ್ ಎಂಬ ಕಾಲವೊಂದು ಬಂದರೂ ಬರಬಹುದು. ಈ ರೀತಿ ಆಗುವುದಕ್ಕಿಂತ ಮುಂಚೆ ಸರ್ಕಾರ ಎಚ್ಚೆತ್ತು ವಿದ್ಯಾಸಂಸ್ಥೆಗಳಿಗೆ ಸರಿಯಾದ ಕಾನೂನುಗಳನ್ನು ಜಾರಿಗೊಳಿಸಬೇಕಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.