ಹಿಜಾಬ್(Hijab) ವಿವಾದ(Controversy) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉಡುಪಿಯಲ್ಲಿ(Udupi) ಆರಂಭವಾದ ಹಿಜಾಬ್ ವಿವಾದ ಹೈಕೋರ್ಟ್(Highcourt) ಮೆಟ್ಟಿಲೇರಿ ಅಂತಿಮ ತೀರ್ಪು ಬಂದಿದ್ದರು, ತೀರ್ಪಿನ ವಿರುದ್ದ ಮತ್ತು ಪರ ಸಂಘರ್ಷ ತೀವ್ರಗೊಳ್ಳುತ್ತಿದೆ. ಹೈಕೋರ್ಟ್ ತೀರ್ಪು ನಮಗೆ ತೃಪ್ತಿ ನೀಡಿಲ್ಲ ಎಂದು ಕೆಲ ಮುಸ್ಲಿಂ ಸಂಘಟನೆಗಳು ರಾಜ್ಯಾದ್ಯಂತ ಒಂದು ದಿನದ ಬಂದ್ ಆಚರಿಸಿದ್ದವು. ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದ್ದರು. ಆದರೆ ಇದೀಗ ಮುಸ್ಲಿಂ ವ್ಯಾಪಾರಿಗಳ ಈ ಕ್ರಮವೇ ಅವರಿಗೆ ಉಲ್ಟಾ ಹೊಡೆಯುತ್ತಿದೆ.

ಹಿಜಾಬ್ ವಿವಾದಕ್ಕೆ ಬೆಂಬಲ ಸೂಚಿಸಿ ಮುಸ್ಲಿಂ ವ್ಯಾಪಾರಿಗಳು ಬಂದ್ ಮಾಡಿದ್ದ ಕ್ರಮಕ್ಕೆ ಪ್ರತಿಕ್ರಮವಾಗಿ ಉಡುಪಿಯ ಪ್ರಸಿದ್ದ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು, ಅನುಮತಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಕಾಪು ಮಾರಿಗುಡಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿವೆ. ಅನೇಕ ಹಿಂದೂ ಸಂಘಟನೆಯ ಮುಖಂಡರು ಮನವಿ ಪತ್ರವನ್ನು ಆಡಳಿತ ಮಂಡಳಿಗೆ ಸಲ್ಲಿಸಿ, ಹಿಂದೂಯೇತರ ವ್ಯಾಪಾರಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹೈಕೋರ್ಟ್ ತೀರ್ಪುನ್ನು ಒಂದು ಕೋಮಿನವರು ಒಗ್ಗಟ್ಟಾಗಿ ವಿರೋಧಿಸಿದ್ದು ದುರದೃಷ್ಠಕರ. ಅವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲಾಗುವುದು ಎಂದು ಕೆಲ ಹಿಂದೂ ಮುಖಂಡರು ಹೇಳಿದ್ದಾರೆ.
ಇನ್ನು ಹಿಂದೂ ಜಾಗರಣ ವೇದಿಕೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಭಿಯಾನವನ್ನು ಆರಂಭಿಸಿದ್ದು, ಹಿಂದೂಗಳ ಜಾತ್ರೆ-ಉತ್ಸವಗಳಲ್ಲಿ ಹಿಂದೂಯೇತರಿಗೆ ವ್ಯಾಪಾರ ಮಾಡಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಹಿಂದೂ ದೇವಾಲಯಗಳ ಆಡಳಿತ ಮಂಡಳಿಗಳು ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ನಿರ್ಬಂಧ ವಿಧಿಸಿವೆ. ಇನ್ನು ಕಾಪು ಹೊಸ ಮಾರಿಗುಡಿ ಆಡಳಿತ ಮಂಡಳಿ ಕೂಡಾ ಮಾರಿಗುಡಿ ಜಾತ್ರೆಯಲ್ಲಿ ಹಿಂದೂಯೇತರರು ವ್ಯಾಪಾರ ಮಾಡುವಂತಿಲ್ಲ. ಅವರಿಗೆ ಈ ಬಾರಿ ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.

ಒಟ್ಟಾರೆಯಾಗಿ ಹಿಜಾಬ್ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಉಡುಪಿಯಾದ್ಯಂತ ಮುಸ್ಲಿಂ ವ್ಯಾಪಾರಿಗಳ ಬಳಿ ವ್ಯವಹಾರ ಮಾಡದಂತೆ ಅಭಿಯಾನ ನಡೆಸಲಾಗುತ್ತಿದೆ. ಈ ವ್ಯಾಪಾರ ನಿರ್ಬಂಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಸೂಚನೆಗಳಿದ್ದು, ಎರಡು ಕೋಮಿನವರು ‘ವ್ಯಾಪಾರ ನಿರ್ಬಂಧ’ ಕದನಕ್ಕೆ ಇಳಿದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.