ಮಂಗಳೂರು : ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಹಿಬಾ ಶೇಖ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಹೌದು, ಮಂಗಳೂರಿನ ರಥಬೀದಿಯ ದಯಾನಂದ ಪೈ-ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದಿದ್ದ ಹಿಬಾ ಶೇಖ್ ಎಂಬ ವಿದ್ಯಾರ್ಥಿನಿಗೆ ಧಾರ್ಮಿಕವಾಗಿ ನಿಂದಿಸಿ, ಮಾನಸಿಕವಾಗಿ ಹಿಂಸೆ ನೀಡಿರುವ ಆರೋಪದಡಿ ಸ್ಥಳೀಯ ಬಂದರು ಪೊಲೀಸರು ಆರೋಪಿ ಸಾಯಿ ಸಂದೇಶ್ ಹಾಗೂ ಆತನ ಜೊತೆಗಿದ್ದವರ ಮೇಲೆ ಕೇಸ್ ದಾಖಲಿಸಿದ್ದಾರೆ.
ರಥಬೀದಿಯ ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಈ ಸಮಯಕ್ಕೆ ಪರೀಕ್ಷೆ ಬರೆಯಲು ತರಗತಿಗೆ ಹಾಜರಾಗಿದ್ದ ಮುಸ್ಲಿಂ ಯುವತಿ ಹಿಬಾ ಶೇಖ್ ಮೇಲೆ ಎಬಿವಿಪಿ ಕಾರ್ಯಕರ್ತರಾದ ನಿತೇಶ್ ಶೆಟ್ಟಿ, ಸಾಯಿ ಸಂದೇಶ್, ಸನತ್ ಶೆಟ್ಟಿ ಸೇರಿದಂತೆ ಇನ್ನು 15 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬುದು ವರದಿಯಲ್ಲಿ ತಿಳಿದುಬಂದಿದೆ. ಹಲ್ಲೆಗೊಳಗಾದ ಯುವತಿ ಮಂಗಳೂರಿನ ಬಂದರು ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಪ್ರಮುಖ ಆರೋಪಿಗಳ ಜೊತೆಗೆ ಮಿಕ್ಕ 14 ಜನರ ವಿರುದ್ಧ ಐಪಿಸಿ ಸೆಕ್ಷನ್ 323, 504ರ ಅಡಿ ಎಫ್.ಐ.ಆರ್ ದಾಖಲಿಸಿದ್ದಾರೆ.