ನಾವು ಹಿಜಾಬ್‍ಗಾಗಿ(Hijab) ಮಾತ್ರ ಹೋರಾಟ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್‍ಗೆ ನಾವು ಕಾರಣರಲ್ಲ. ನಮ್ಮ ಹಕ್ಕಿಗಾಗಿ ಮಾತ್ರ ನಾವು ಹೋರಾಟ ಮಾಡುತ್ತಿದ್ದು, ಉಳಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್‍ಗೂ ನಮಗೂ ಸಂಬಂಧವಿಲ್ಲ ಎಂದು ಹಿಜಾಬ್ ಪರ ವಿದ್ಯಾರ್ಥಿನಿಯರಾದ ಅಲಿಯಾ ಮತ್ತು ಅಲ್ಮಾಸ್ ಹೇಳಿದ್ದಾರೆ.

ಖಾಸಗಿ ಮಾದ್ಯಮದೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರವನ್ನು ಇಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ನಾವು ಹಿಜಾಬ್ ಬಿಟ್ಟು ಉಳಿದ ವಿಚಾರಗಳ ಬಗ್ಗೆ ಕಮೆಂಟ್ ಮಾಡಿಲ್ಲ. ಧರ್ಮ ದಂಗಲ್ ಮೂಲಕ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ, ಒಂದು ಸಮುದಾಯವನ್ನು ದ್ವೇಷಿಸುವ ಕಾರ್ಯ ನಡೆಯುತ್ತಿದೆ. ನಾವು ಅಜಾನ್ ಕೂಗಿ, ಕೂಗಬೇಡಿ ಎಂದಿಲ್ಲ. ವ್ಯಾಪಾರ ಮಾಡಿ, ಮಾಡಬೇಡಿ ಎಂದಿಲ್ಲ. ನಾವು ಹಿಜಾಬ್‍ಗಾಗಿ ಮಾತ್ರ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಹಿಜಾಬ್ ಧರಿಸುವುದು ನಮ್ಮ ಹಕ್ಕು ಅದನ್ನು ಕೇಳಿದ್ದೇವೆ. ನಾವು ಕೇಳದ್ದೇ ತಪ್ಪು ಅನ್ನೊ ತರ ನಮ್ಮನ್ನು ನೋಡಲಾಗುತ್ತಿದೆ. ಹಿಜಾಬ್ ಮೂಲಕ ನಾವು ನಮ್ಮ ಮುಖ ಮತ್ತು ಕೂದಲನ್ನು ಮಾತ್ರ ಮುಚ್ಚಿಕೊಳ್ಳುತ್ತೇವೆ ಹೊರತು, ನಮ್ಮ ಮೆದುಳನ್ನಲ್ಲಾ. ವಿದ್ಯಾವಂತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಇನ್ನು ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ದಯವಿಟ್ಟು ನಮ್ಮನ್ನು ನೋಯಿಸಬೇಡಿ ಎಂದು ಮನವಿ ಮಾಡಿದರು.

ಹಿಜಾಬ್ ಮತ್ತು ಶಿಕ್ಷಣ ಎರಡು ನಮಗೆ ಮುಖ್ಯವಾಗಿವೆ. ಈ ವಿವಾದವನ್ನು ಕಾಲೇಜಿನಲ್ಲೇ ಇತ್ಯರ್ಥ ಮಾಡಬಹುದಿತ್ತು. ಆದರೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಮೂಲಕ ನಮ್ಮನ್ನು ದೂಷಿಸಲಾಗುತ್ತಿದೆ. ಈ ಘಟನೆಯ ನಂತರ ನಮ್ಮನ್ನು ಟೆರರಿಸ್ಟ್ ತರ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.