ನಮ್ಮ ಭವಿಷ್ಯ ಹಾಳಾಗದಂತೆ ತಡೆಯಲು ನಿಮಗೆ ಇನ್ನು ಅವಕಾಶವಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ನಮಗೆ ಅವಕಾಶ ನೀಡಬೇಕು. ಆ ಮೂಲಕ ನಮ್ಮ ಭವಿಷ್ಯ ಹಾಳಾಗದಂತೆ ತಡೆಯಬೇಕೆಂದು ಹಿಜಾಬ್(Hijab) ಪರ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ ಮುಖ್ಯಮಂತ್ರಿ(ChiefMinister) ಬಸವರಾಜ್ ಬೊಮ್ಮಾಯಿ(Basavaraj Bommai) ಅವರಿಗೆ ಮನವಿ ಮಾಡಿದ್ದಾಳೆ.

ಈ ಕುರಿತು ಟ್ವೀಟ್ ಮಾಡಿರುವ ಅಲಿಯಾ ಅಸ್ಸಾದಿ, ಇದೇ ತಿಂಗಳ 22 ರಿಂದ ನಮ್ಮ ಪರೀಕ್ಷೆಗಳು ಪ್ರಾರಂಭವಾಗಲಿವೆ. ಹೀಗಾಗಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ನಮಗೆ ಅವಕಾಶ ನೀಡಬೇಕು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಭವಿಷ್ಯ ಹಾಳಾಗದಂತೆ ತಡೆಯಲು ನಿಮಗಿನ್ನೂ ಅವಕಾಶವಿದೆ. ನಾವು ದೇಶದ ಭವಿಷ್ಯ. ನಮ್ಮ ಭವಿಷ್ಯವನ್ನು ಹಾಳು ಮಾಡಬೇಡಿ ಎಂದಿದ್ದಾಳೆ. ಇನ್ನು ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಲು ಅವಕಾಶ ಕೋರಿ ಹೈಕೋರ್ಟ್(Highcourt) ಮೆಟ್ಟಿಲೇರಿದ್ದ ನಾಲ್ವರು ವಿದ್ಯಾರ್ಥಿನಿಯರ ಪೈಕಿ ಅಲಿಯಾ ಅಸ್ಸಾದಿ ಕೂಡಾ ಒಬ್ಬಳು.
ಈಗಾಗಲೇ ರಾಜ್ಯ ಸರ್ಕಾರ ಹಿಜಾಬ್ ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ಮುಕ್ತಾಯವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕೂಡಾ ಹಿಜಾಬ್‍ಗೆ ಅವಕಾಶ ನೀಡಿರಲಿಲ್ಲ. ಇನ್ನು ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಉಡುಪಿಯ ಅಲಿಯಾ ಅಸ್ಸಾದಿ, ಆಯಿಷಾ ಪಾಲವ್ಕರ್, ಆಯಿಷಾ ಹಜಾರಾ ಅಲ್ಮಾಸ್ ಮತ್ತು ಮುಸ್ಕಾನ್ ಜೈನಾಬ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಯುವತಿಯರ ಪರ ಖ್ಯಾತ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ದರು. ಸರ್ಕಾರದ ಪರ ಪ್ರಭುಲಿಂಗ್ ನಾವಲಗಿ ವಾದ ಮಂಡಿಸಿದ್ದರು.

ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಸಾಂವಿಧಾನಿಕ ಪೀಠ ಸುಧೀರ್ಘ ವಿಚಾರಣೆ ನಡೆಸಿ, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯವಲ್ಲ. ಸಮವಸ್ತ್ರ ಪಾಲನೆ ದೃಷ್ಟಿಯಿಂದ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಸದ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಈ ನಾಲ್ವರು ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಇನ್ನು ಕೈಗೆತ್ತಿಕೊಂಡಿಲ್ಲ.