ಗುವಾಹಟಿ, ಮೇ. 10: ಅಸ್ಸಾಂನ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಅವರು ಇಂದು ಬೆಳಗ್ಗೆ 11.30ಕ್ಕೆ ಅಸ್ಸಾಂ ೧೫ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾನುವಾರ ಶರ್ಮಾ ಅವರನ್ನು ಅಸ್ಸಾಂನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಗುವಾಹಟಿಯ ಶ್ರೀಮಂತ ಶಂಕರದೇವ ಇಂಟರ್ ನ್ಯಾಷನಲ್ ಆಡಿಟೋರಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು ಗವರ್ನರ್ ಜಗದೀಶ್ ಮುಖಿ ಪ್ರಮಾಣ ವಚನ ಬೋಧಿಸಲಿದ್ದಾರೆ.
ನನ್ನ ಹೃದಯದಲ್ಲಿ ಅಸ್ಸಾಂನ ಸುಗಂಧ ಮತ್ತು ನನ್ನ ನರಗಳಲ್ಲಿ ಜನರ ಬಗೆಗೆ ಅದ್ಭುತ ಪ್ರೀತಿಯೊಂದಿಗೆ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನನ್ನ ಮೇಲಿನ ನಿಮ್ಮ ಧರ್ಮನಿಷ್ಠೆ ಇಲ್ಲದಿದ್ದರೆ ನಾನು ನಾನೇ ಆಗುತ್ತಿರಲಿಲ್ಲ. ಈ ದಿನ, ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದು ಶರ್ಮಾ ಭಾನುವಾರ ಸಂಜೆ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಶರ್ಮಾ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದರು.
2015 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಕಾಂಗ್ರೆಸ್ ಮುಖಂಡ, ಸರ್ಬಾನಂದ ಸೋನೊವಾಲ್ ಅವರ ನಂತರ ಅಸ್ಸಾಂನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಎರಡನೇ ಬಿಜೆಪಿ ನಾಯಕರಾಗಿದ್ದರೆ. ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) 2016 ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ ಇಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸಿದ್ದು ಆಗಿನ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದ ಸೋನೊವಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.