South Africa : ಸಾರ್ಟ್ಜಿ ಬಾರ್ಟ್ಮನ್ ಎಂದೂ ಕರೆಯಲ್ಪಡುವ ಸಾರಾ ಬಾರ್ಟ್ಮನ್(Sara Bartman) ಅವರು 1789 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ(South Africa) ಜನಿಸಿದರು. ಈಕೆ ಹೊಟ್ಟೆಂಟಾಟ್ ಜನರ ಪ್ರತಿನಿಧಿಯಾಗಿದ್ದಳು, ಈ ಜನಾಂಗದ ಮಹಿಳೆಯರ ವೈಶಿಷ್ಟ್ಯ ಎಂದರೆ, ದೇಹದ ಅಂಗಗಳು ಸ್ವಲ್ಪ ಮಟ್ಟಿಗೆ ದೊಡ್ಡ ಗಾತ್ರದಲ್ಲಿರುವುದು.

ಈ ಜನಾಂಗದಲ್ಲಿ ಸಾರಾ ಬಾರ್ಟ್ಮನ್ ಅವರು, ಸುಮಾರು 1789 ರಲ್ಲಿ ಗಮ್ಟೂಸ್ ನದಿಯ ಬಳಿ ಜನಿಸಿದರು. ಇದು ಈಗಿನ ಪೂರ್ವ ಕೇಪ್ ಪ್ರಾಂತ್ಯದಲ್ಲಿದೆ. ಸೈನಿಕರ ದಾಳಿಯಲ್ಲಿ ಈಕೆಯ ಪೋಷಕರು ಕೊಲ್ಲಲ್ಪಟ್ಟರು, ಆ ನಂತರ ಈಕೆ ಕೇಪ್ ಟೌನ್ ಬಳಿಯ ರೈತರಲ್ಲಿ ಕೆಲಸ ಮಾಡುವ ಗುಲಾಮಳಾದಳು.
ಸಾರಾ ಬಾರ್ಟ್‌ಮ್ಯಾನ್ ಮೊದಲಿನಿಂದಲೂ ಸ್ವಲ್ಪ ಅಸಹಜವಾಗಿ ಕಾಣುವಷ್ಟು ದೊಡ್ಡ ಪೃಷ್ಠವನ್ನು ಹೊಂದಿದ್ದರು, ಬಹುಶಃ ಸ್ಟೀಟೋಪಿಜಿಯಾ ಎಂಬ ಸ್ಥಿತಿಯಿಂದ ಇದು ಉಂಟಾಗಿರಬಹುದು ಎಂದು ಹೇಳಲಾಗುತ್ತದೆ. 1810 ರಲ್ಲಿ ಕೇಪ್‌ಗೆ ಭೇಟಿ ನೀಡಿದ ಇಂಗ್ಲಿಷ್ ವೈದ್ಯರೊಬ್ಬರು ಅವಳ ಆಸಹಜ ದೇಹ ಸ್ಥಿತಿಯನ್ನು ಗಮನಿಸಿ, ಬಾರ್ಟ್‌ಮ್ಯಾನ್‌ನ ಈ ದೇಹಸ್ಥಿತಿಯಿಂದ ಹಣ ಸಂಪಾದಿಸಬಹುದು ಎಂಬ ಯೋಜನೆ ಹಾಕಿದರು.

“ನನ್ನೊಂದಿಗೆ ಇಂಗ್ಲೆಂಡ್‌ಗೆ ಬಂದರೆ, ನೀನು ಶ್ರೀಮಂತ ಮತ್ತು ಪ್ರಸಿದ್ಧಳಾಗುತ್ತೀಯ” ಎಂದು ವೈದ್ಯರು ಬಾರ್ಟ್‌ಮ್ಯಾನ್‌ಗೆ ಭರವಸೆ ನೀಡಿದರು. ಹೀಗಾಗಿ ಬಹಳಷ್ಟು ಯೋಚಿಸಿದ ಸಾರಾ, ಅವರೊಂದಿಗೆ ಹೋಗಲು ಒಪ್ಪಿಕೊಂಡಳು.
ನಂತರ, ಇಂಗ್ಲೆಂಡ್‌ನಲ್ಲಿ(England) ಈ ವೈದ್ಯ ಸಾರಾ ಬಾರ್ಟ್‌ಮ್ಯಾನ್ ದೇಹದ ಪ್ರದರ್ಶನಗಳನ್ನು ಆರಂಭಿಸ್ತಾರೆ. ಸಾರಾಳನ್ನು ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳುವಂತೆ ಮಾಡಲಾಯಿತು, ಅನೇಕ ಸಾರ್ವಜನಿಕರು ಅವಳ ಅಸಹಜ ದೇಹವನ್ನು ನೋಡಲು ಕಾತುರರಾಗಿ ಪ್ರದರ್ಶನಕ್ಕೆ ಬರುತ್ತಿದ್ದರು.

ಸಾರಾಗೆ ಈ ಪ್ರದರ್ಶನದಿಂದ ಬರುವ ಲಾಭದ ಅರ್ಧದಷ್ಟು ನೀಡುವ ಭರವಸೆ ಕೊಡಲಾಗಿತ್ತು, ಆದರೆ ಕೊನೆಗೆ ಅವಳಿಗೆ ಸ್ವಲ್ಪ ಹಣವನ್ನು ಮಾತ್ರ ಕೊಡಲಾಯಿತು. ಕೆಲವು ಇಂಗ್ಲಿಷ್ ಜನರು ಬಾರ್ಟ್‌ಮ್ಯಾನ್ ಅವರ ಪ್ರದರ್ಶನದ ವಿರುದ್ಧ ಪ್ರತಿಭಟಿಸಿದರೂ, ಪ್ರದರ್ಶನಗಳನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ.
ನಂತರ, 1814 ರಲ್ಲಿ ಸಾರಾಳನ್ನು ಫ್ರಾನ್ಸ್‌ನ ಪ್ಯಾರಿಸ್‌ಗೆ ಕರೆದೊಯ್ಯಲಾಯಿತು. ಅಲ್ಲಿಯೂ ಪ್ರದರ್ಶನಗಳು ಮುಂದುವರೆದವು. ಕೊನೆಗೆ 1815 ರಲ್ಲಿ ಪ್ಯಾರಿಸ್ನಲ್ಲಿ ಸಾರಾ ಕೊನೆಯುಸಿರೆಳೆದಳು. ಸಾರಾ ಬಾರ್ಟ್‌ಮ್ಯಾನ್ ಸಾವಿನ ನಂತರ, ವಿಜ್ಞಾನಿಗಳು ಅವಳ ದೇಹದ ಭಾಗಗಳನ್ನು ಸಂರಕ್ಷಿಸಿದರು. ಅನೇಕ ವರ್ಷಗಳ ಕಾಲ, ಅವುಗಳನ್ನು ಪ್ಯಾರಿಸ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಆದರೆ, 1994 ರಲ್ಲಿ ನೆಲ್ಸನ್ ಮಂಡೇಲಾ(Nelson Mandela) ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದಾಗ, ಸಾರಾ ಬಾರ್ಟ್‌ಮ್ಯಾನ್‌ನ ಅವಶೇಷಗಳನ್ನು ಹಿಂದಿರುಗಿಸಲು ಅವರು ಫ್ರಾನ್ಸ್ ಸರ್ಕಾರಕ್ಕೆ ಮನವಿ ಮಾಡಿದರು. ಇದಕ್ಕೆ 2002 ರಲ್ಲಿ ಫ್ರಾನ್ಸ್ ಸರ್ಕಾರ ಒಪ್ಪಿಕೊಂಡಿತು, ನಂತರ ಅವಳ ಅವಶೇಷಗಳನ್ನು ದಕ್ಷಿಣ ಆಫ್ರಿಕಾಕ್ಕೆ ತರಲಾಯಿತು.
ನಂತರ ಸಾರಾ ಬಾರ್ಟ್‌ಮ್ಯಾನ್‌ನ ಅವಶೇಷಗಳನ್ನು ಅವಳ ಜನ್ಮಸ್ಥಳದ ಬಳಿ ಸಮಾಧಿ ಮಾಡಲಾಯಿತು. ಆದರೆ, ಇತಿಹಾಸದಲ್ಲಿ ಆಫ್ರಿಕನ್ ಮಹಿಳೆಯರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬುದಕ್ಕೆ ಸಾರಾ ಅವರ ಕಥೆ ಒಂದು ಉದಾಹರಣೆಯಾಗಿದೆ.
- ಪವಿತ್ರ