ಇವತ್ತಿನ ಜಮಾನದಲ್ಲಿ ತರ ತರಹದ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಗ್ಗದ ನ್ಯಾನೋ ಕಾರಿನಿಂದ ಹಿಡಿದು ದುಬಾರಿ ಬೆಲೆಯ ರೋಲ್ಸ್ ರಾಯ್ಸ್, ರೇಂಜ್ ರೋವರ್, ಆಡಿ, ಮರ್ಸಿಡೀಸ್, ಬುಗಾಟಿ, ಲ್ಯಾಂಬೋರ್ಗಿನಿ, ಫೆರಾರಿವರೆಗೂ ಸಾವಿರಾರು ಬಗೆಯ ಕಾರುಗಳಿವೆ.

ಆದರೆ, ಕೆಲವು ದಶಕಗಳಷ್ಟು ಹಿಂದಿನ ಕಾಲಕ್ಕೆ ಒಮ್ಮೆ ಕಣ್ಣಾಡಿಸಿದ್ರೆ.. ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದದ್ದು, ‘ಅಂಬಾಸಿಡರ್’(Ambasador) ಕಾರು ಮಾತ್ರ. ಹೌದು, ಆ ಕಾಲದಲ್ಲಿ ಸಾರ್ವಜನಿಕರಿಂದ ಹಿಡಿದದು, ರಾಜಕಾರಣಿಗಳು, ಅತೀ ಶ್ರೀಮಂತರೂ ಕೂಡ ಇದೇ ಕಾರನ್ನು ಬಳಸುತ್ತಿದ್ರು. ಈಗ್ಲೂ ಸಹಾ ಎಲ್ಲರಿಗೂ ‘ಅಂಬಾಸಿಡರ್’ ಕಾರಿನ ಬಗ್ಗೆ ತಿಳಿದಿದೆ. ಯಾಕಂದ್ರೆ, ಈಗಲೂ ಕೆಲವು ಜನ ‘ಅಂಬಾಸಿಡರ್’ ಕಾರಿನ ಮೇಲೆ ಬಹಳಷ್ಟು ಪ್ರೀತಿಯಿಟ್ಟಿದ್ದಾರೆ. 1958 ರಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಸಂಸ್ಥೆ ಭಾರತಕ್ಕೆ ನೀಡಿದ ಅಭೂತಪೂರ್ವ ಉಡುಗೊರೆ ‘ಅಂಬಾಸಿಡರ್’.
‘ಮೇಕ್ ಇನ್ ಇಂಡಿಯಾ’ ಎಂಬ ಪರಿಕಲ್ಪನೆ ಇದೀಗ ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ, 1958 ರಲ್ಲೇ ಭಾರತದಲ್ಲೇ ತಯಾರಾದ ‘ಅಂಬಾಸಿಡರ್’ ಕಾರು ದೇಶದ ರಸ್ತೆಗಳಿಗೆ ಲಗ್ಗೆ ಇಟ್ಟಿತ್ತು. ಭಾರತದಲ್ಲಿ ಏಳು ತಲೆಮಾರುಗಳ ಕಾಲ ‘ಅಂಬಾಸಿಡರ್’ ಕಾರು ಚಲಾವಣೆಯಲ್ಲಿತ್ತು. ಮೊದಲ ಮಾಡೆಲ್ ‘ಮಾರ್ಕ್-1’ ಆಗಿದ್ದರೆ, ಕೊನೆಯ ಮಾಡೆಲ್ ಗೆ ‘ಎನ್ ಕೋರ್’. BS-IV ಎಂಜಿನ್ ಸ್ಟಾಂಡರ್ಡ್ ಅನ್ನು ಇದು ಅನುಸರಿಸಿತ್ತು. ‘ಅಂಬಾಸಿಡರ್’ ಕಾರಿನ ವಿಶೇಷತೆ ಅಂದ್ರೆ, ಇದರ ಚಾಲನೆ ಮಾಡುವಾಗ ಹೆಚ್ಚು ಸಮಸ್ಯೆಗಳು ಕಂಡುಬರುತ್ತಿರಲಿಲ್ಲ.

ಕೆಲವೊಮ್ಮೆ ಸಮಸ್ಯೆ ಕಂಡುಬಂದರೂ ರಿಪೇರಿ ಮಾಡುವುದು ಅಷ್ಟು ಕಷ್ಟವಾಗಿರ್ಲಿಲ್ಲ. ಪರ್ಫಾರ್ಮೆನ್ಸ್, ಸರ್ವೀಸ್ ಕಿರಿಕಿರಿ ಇರಲಿಲ್ಲ. ಹೀಗಾಗಿಯೇ, ‘ಮಗು ಕೂಡ ಅಂಬಾಸಿಡರ್ ಕಾರನ್ನ ರಿಪೇರಿ ಮಾಡಬಹುದು’ ಎಂಬ ಮಾತು ಆಗ ಚಾಲ್ತಿಯಲ್ಲಿತ್ತು. ಆದರೆ, ಕಹಿ ಸುದ್ದಿ ಅಂದ್ರೆ 2003 ರಲ್ಲಿ ‘ಅಂಬಾಸಿಡರ್’ ಕಾರಿಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೊಕ್ ನೀಡಿದರು. ‘ಅಂಬಾಸಿಡರ್’ ಕಾರಿನ ಜಾಗದಲ್ಲಿ ‘BMW’ ಕಾರು ತಂದರು. ಇದು ಹಲವರಿಗೆ ಆಘಾತ ತಂದಿದ್ದು ಸುಳ್ಳಲ್ಲ. ಸರ್ಕಾರಿ ಆಡಳಿತ ವರ್ಗದಲ್ಲಿ ‘ಅಂಬಾಸಿಡರ್’ ಬೇಡಿಕೆ ಕುಸಿತ ಕಂಡಿದ್ದು ಬಹುಶಃ ಇಲ್ಲಿಂದಲೇ.!
ಬೇಡಿಕೆಯಲ್ಲಿ ಅತೀವ ಕುಸಿತ ಕಂಡು ಬಂದ ಹಿನ್ನಲೆಯಲ್ಲಿ 2014 ರಲ್ಲಿ ಹಿಂದೂಸ್ತಾನ್ ಮೋಟಾರ್ಸ್ ‘ಅಂಬಾಸಿಡರ್’ ಪ್ರೊಡಕ್ಷನ್ ಗೆ ಫುಲ್ ಸ್ಟಾಪ್ ಇಡ್ತು. ‘ಅಂಬಾಸಿಡರ್’ ಬ್ರಾಂಡ್ ಗೆ ಹೊಸ ಲುಕ್ ‘ಆಂಬಿ’ ಕೊಡಲು ಕಂಪನಿ ಪ್ರಯತ್ನ ಪಟ್ಟರೂ ಅದು ಸಫಲವಾಗಲಿಲ್ಲ. ಹೀಗಾಗಿ, 2014 ರಲ್ಲಿ ‘ಅಂಬಾಸಿಡರ್’ ಸುವರ್ಣ ಅಧ್ಯಾಯ ಮುಕ್ತಾಯವಾಯ್ತು.

ಕಿಂಗ್ ಆಫ್ ಇಂಡಿಯನ್ ರೋಡ್ಸ್’ ಅಂತಲೇ ಜನಪ್ರಿಯತೆ ಪಡೆದಿದ್ದ ‘ಅಂಬಾಸಿಡರ್’ ಕಾರು ಇಂದು ಉತ್ಪಾದನೆ ಆಗುತ್ತಿಲ್ಲ ನಿಜ, ಆದ್ರೂ ಇದರ ಅಭಿಮಾನಿಗಳು ಇನ್ನೂ ಇದ್ದಾರೆ ಅನ್ನೋದು ಮಾತ್ರ ಸುಳ್ಳಲ್ಲ.
- ಪವಿತ್ರ ಸಚಿನ್