ಗೀತ ರಚನೆಕಾರ ಕಿನ್ನಾಳ ರಾಜು ನಿರ್ದೇಶಿಸಿದ ಪ್ರಥಮ ಚಿತ್ರ ಹಿಟ್ಲರ್’ನ ಟೀಸರ್ ಬಿಡುಗಡೆಯನ್ನು ಜಿ ಜನಾರ್ದನ ರೆಡ್ಡಿ ನೆರವೇರಿಸಿದರು. “ಕಿನ್ನಾಳ ರಾಜು ಬರೆದಿರುವಕೆಜಿಎಫ್’ ಚಿತ್ರದ ಹಾಡು ಎಲ್ಲರಂತೆ ನನಗೆ ಕೂಡ ತುಂಬ ಇಷ್ಟ. ಈಗಲೂ ಕಾರಲ್ಲಿ ಆ ಹಾಡನ್ನು ಹಾಕಿ ಕೇಳುತ್ತಿರುತ್ತೇನೆ. ಅದನ್ನು ರಚಿಸಿರುವ ಕಿನ್ನಾಳ ರಾಜು ಪ್ರತಿಭಾವಂತರು. ರವಿ ಬಸ್ರೂರು ಅವರ ಸಂಗೀತವೂ ಇಷ್ಟವಾಗಿತ್ತು. ರವಿ ಬಸ್ರೂರು ಅವರು `ಹಿಟ್ಲರ್’ ಚಿತ್ರ ಮಾಡಲು ತುಂಬ ಸಹಕಾರ ನೀಡಿದ್ದಾರೆ ಎಂದು ಗೊತ್ತಾಯ್ತು. ಒಟ್ಟು ಚಿತ್ರಕ್ಕೆ ಯಶಸ್ಸು ಸಿಗಲಿ” ಎಂದು ಜನಾರ್ದನ ರೆಡ್ಡಿ ಈ ಸಂದರ್ಭದಲ್ಲಿ ಹಾರೈಸಿದರು.
ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ರವಿ ಬಸ್ರೂರು ಮಾತನಾಡಿ “ಹೊಸ ತಂಡವಾದರೂ ನಿರ್ದೇಶಕರಿಗೆ ದಶಕದ ಅನುಭವ ಇದೆ. ನಾವಿಬ್ಬರೂ ಒಂದು ಚಿತ್ರ ಮಾಡಬೇಕೆಂದು ಬಹಳ ಹಿಂದೆಯೇ ಮಾತನಾಡಿಕೊಂಡಿದ್ದೆವು” ಎನ್ನುವುದನ್ನು ನೆನಪಿಸಿದರು. ಅಂಜನೀಪುತ್ರ’ ಚಿತ್ರಕ್ಕೆ ನಾನು ನೀಡಿದ ಸಂಗೀತಕ್ಕೆ ಹಾಡುಗಳನ್ನು ಬರೆದು ಗೀತರಚನೆಕಾರನಾಗಿ ಗುರುತಿಸಿಕೊಂಡರು. ಈಗ ಚಿತ್ರ ನಿರ್ದೇಶಕರಾಗಿಯೂ ಹೆಸರು ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಬಸ್ರೂರು ಹೇಳಿದರು. “ನಮ್ಮ ಚಿತ್ರದ ನಾಯಕ ಅನಾಥ. ಆದರೆ ಅನಾಥನೋರ್ವ ಯಾಕೆ ಸರ್ವಾಧಿಕಾರ ಬಯಸುತ್ತಾನೆ ಮತ್ತು ಭೂಗತ ಲೋಕ ಪ್ರವೇಶಿಸುತ್ತಾನೆ ಎನ್ನುವುದನ್ನು ತೋರಿಸುವ ಈ ಚಿತ್ರದಲ್ಲಿ ಆತನ ಪ್ರಾಯಶ್ಚಿತ್ತದ ಬದುಕನ್ನು ಕೂಡ ತೋರಿಸಲಾಗಿದೆ” ಎಂದರು ಚಿತ್ರದ ನಿರ್ದೇಶಕ ಕಿನ್ನಾಳ ರಾಜು. ಕೆಜಿಎಫ್ಗರುಡ’ ಖ್ಯಾತಿಯ ರಾಮ್ ಅವರು ಚಿತ್ರದ ಟೀಸರ್ಗೆ ಹಿನ್ನೆಲೆ ಧ್ವನಿ ನೀಡಿದ್ದು, ಅವರು ಕೂಡ ಮಾಧ್ಯಮಗೋಷ್ಠಿಗೆ ಅತಿಥಿಯಾಗಿ ಬಂದು ಶುಭ ಕೋರಿದರು.
ಚಿತ್ರದ ನಾಯಕ ಲೋಹಿತ್ ಈ ಹಿಂದೆ `ಜಂಟ್ಲ್ ಮನ್’ ಚಿತ್ರದಲ್ಲಿ ಖಳನಾಯಕರಾಗಿ ನಟಿಸಿದ್ದರು. ಇದೀಗ ನಾಯಕರಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು. ಚಿತ್ರದ ನಾಯಕಿ ಸಸ್ಯ ಅವರು ತಮಗೆ ಇದು ಎರಡನೇ ಸಿನಿಮಾ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ ಮಾಡಿರುವುದಾಗಿ ತಿಳಿಸಿದರು. ನಾಯಕ ಲೋಹಿತ್ ಅವರ ಪತ್ನಿ ಮಮತಾ ಚಿತ್ರವನ್ನು ನಿರ್ಮಿಸಿದ್ದು ಸಿನಿಮಾರಂಗದ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಂಡಿದ್ದಾಗಿ ಹೇಳಿದರು. ಚಿತ್ರದಲ್ಲಿ ಖಳನಟನಾಗಿ ನಟಿಸುತ್ತಿರುವ ವರ್ಧನ್ ತೀರ್ಥಹಳ್ಳಿ ಮತ್ತು ಸಂಗೀತ ನಿರ್ದೇಶಕ ಆಕಾಶ್ ಪರ್ವ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.