ರಾಜಸ್ಥಾನ, ಮಾ. 11: ತನ್ನ ಎರಡನೇ ಮದುವೆಗೆ ಕುಟುಂಬಸ್ಥರು ಒಪ್ಪದ ಕಾರಣ ಕೋಪಗೊಂಡ 60 ವರ್ಷದ ವೃದ್ಧ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧೋಲ್ಪುರ್‌ನಲ್ಲಿ ನಡೆದಿದೆ.
ಸೊಬ್ರಾನ್ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವೃದ್ಧನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ವಿದ್ಯುತ್ ಇಲಾಖೆಯವರು ಎಚ್ಚೆತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಇದರಿಂದ ವೃದ್ಧನಿಗೆ ಏನೂ ಆಗಿಲ್ಲ. ವೃದ್ಧನ ಮನವೊಲಿಸಿ ಕಂಬದಿಂದ ಕೆಳಗೆ ಇಳಿಸಿದ್ದಾರೆ.
ಇವರಿಗೆ ಮದುವೆಯಾಗಿ ಪತ್ನಿ ತೀರಿಕೊಂಡಿದ್ದರು. ದಂಪತಿಗೆ ಐವರು ಮಕ್ಕಳಿದ್ದಾರೆ. ಪತ್ನಿ ಸಾವಿಗೀಡಾದ ನಂತರ ಎರಡನೇ ಮದುವೆಗೆ ಮುಂದಾದಾಗ ಕುಟುಂಬಸ್ಥರು ಒಪ್ಪಿಲ್ಲ. ಇದರಿಂದ ಮನನೊಂದು ವೃದ್ಧ 11 ಸಾವಿರ ವೋಲ್ಟೇಜ್ ಇರುವ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.