- ಬೆಂಗಳೂರಿನ ಹೋಟೆಲ್‌ಗಳಲ್ಲಿ (hotel owners new rules) ಇನ್ಮುಂದೆ ಟೇಬಲ್ ಚಾರ್ಜ್
- ಇನ್ಮುಂದೆ ಹೋಟೆಲ್ ನಲ್ಲಿ ಗ್ರಾಹಕರು ಗಂಟೆಗಟ್ಟಲೆ ಕುಳಿತರೆ ಹೆಚ್ಚುವರಿ ಶುಲ್ಕ
- ಒಂದು ಕಪ್ ಟೀ, ಎರಡು ಗಂಟೆ ಕುಳಿತುಕೊಳ್ಳುವ ಟ್ರೆಂಡ್‌ಗೆ ಬೀಳಲಿದೆ ಬ್ರೇಕ್
Bengaluru: ಸಿಲಿಕಾನ್ ಸಿಟಿ ಎಂದು ಹೆಸರಾಗಿರುವ ಬೆಂಗಳೂರಿನಲ್ಲಿ (hotel owners new rules) ಆಹಾರ ಸಂಸ್ಕೃತಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ.
ನಗರದಲ್ಲಿ ಕೆಫೆ ಮತ್ತು ಹೋಟೆಲ್‌ಗಳು ಕೇವಲ ಊಟ ಅಥವಾ ಕಾಫಿ ಕುಡಿಯುವ ಸ್ಥಳಗಳಾಗಿ ಉಳಿಯದೇ, ಅನೌಪಚಾರಿಕ ಸಭೆ, ಆಫೀಸ್ ಚರ್ಚೆ, ರಾಜಕೀಯ ಮಾತುಕತೆ, ವ್ಯಾಪಾರ ನಿರ್ಣಯಗಳ ಕೇಂದ್ರಗಳಾಗಿವೆ.

ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ವ್ಯಾಪಾರ ಪಾಲುದಾರರು ಒಂದೇ ಕಪ್ ಕಾಫಿಯೊಂದಿಗೆ ಗಂಟೆಗಟ್ಟಲೆ ಕುಳಿತು ಮಾತುಕತೆ ನಡೆಸುವುದು ಈಗ ಸಾಮಾನ್ಯ ದೃಶ್ಯ.
ಆದರೆ ಈ ಪ್ರವೃತ್ತಿಯಿಂದ ಹೋಟೆಲ್ ಮಾಲೀಕರಿಗೂ ಹಾಗೂ ಇತರ ಗ್ರಾಹಕರಿಗೂ (hotel owners new rules) ತೊಂದರೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇತ್ತೀಚೆಗೆ ನಗರದ ಒಂದು ಹೋಟೆಲ್‌ನಲ್ಲಿ ಅಂಟಿಸಲಾಗಿದ್ದ ನೋಟಿಸ್ (Notice) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಆ ನೋಟಿಸ್‌ನಲ್ಲಿ “ಇಲ್ಲಿ ಯಾವುದೇ ಮೀಟಿಂಗ್‌ಗೆ ಅವಕಾಶವಿಲ್ಲ. ಒಂದು ಗಂಟೆಗಿಂತ ಹೆಚ್ಚು ಸಮಯ ಕುಳಿತರೆ ಪ್ರತಿ ಗಂಟೆಗೆ 1,000 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ” ಎಂದು ಉಲ್ಲೇಖಿಸಲಾಗಿತ್ತು.
ಈ ನೋಟಿಸ್‌ನ ಫೋಟೋ ವೈರಲ್ (Viral) ಆಗುತ್ತಿದ್ದಂತೆ, ಬೆಂಗಳೂರಿನ ಹೋಟೆಲ್‌ಗಳಲ್ಲಿ ಮೀಟಿಂಗ್ ಸಂಸ್ಕೃತಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿವೆ.
ಕೆಲವರು ಇದನ್ನು ಹೋಟೆಲ್ ಮಾಲೀಕರ ಹಕ್ಕು ಎಂದು ಸಮರ್ಥಿಸಿದರೆ, ಇನ್ನೂ ಕೆಲವರು ಗ್ರಾಹಕರಿಗೆ ಇದು ಅನ್ಯಾಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಐದು ನಕ್ಷತ್ರ, ಮೂರು ನಕ್ಷತ್ರ ಹಾಗೂ ಸಾಮಾನ್ಯ ಹೋಟೆಲ್‌ಗಳನ್ನು ಸೇರಿಸಿ ಸುಮಾರು 35 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ.
ಈ ಪೈಕಿ ಸಣ್ಣ ಮತ್ತು ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಮಾಲೀಕರು ಹೇಳುತ್ತಾರೆ. ಗ್ರಾಹಕರು ಕಡಿಮೆ ಮೊತ್ತದ ಟೀ ಅಥವಾ ಕಾಫಿ ಆರ್ಡರ್ ಮಾಡಿ, ಎರಡು ರಿಂದ ಮೂರು ಗಂಟೆಗಳವರೆಗೆ ಒಂದೇ ಟೇಬಲ್‌ನಲ್ಲಿ ಕುಳಿತುಕೊಳ್ಳುತ್ತಾರೆ.
ಪೀಕ್ ಅವರ್‌ಗಳಲ್ಲಿ ಹೊಸ ಗ್ರಾಹಕರು ಬಂದು ಕುಳಿತುಕೊಳ್ಳಲು ಜಾಗ ಸಿಗದೇ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಹೋಟೆಲ್‌ಗಳ ವ್ಯಾಪಾರಕ್ಕೆ ನಷ್ಟವಾಗುತ್ತಿದ್ದು, ಸಿಬ್ಬಂದಿಗೂ ಅನಗತ್ಯ ಒತ್ತಡ ಎದುರಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಲವು ಹೋಟೆಲ್ ಮಾಲೀಕರು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್‌ಗೆ (Association) ದೂರು ಸಲ್ಲಿಸಿದ್ದಾರೆ.
ಕೆಲವು ಐಷಾರಾಮಿ ಐದು ನಕ್ಷತ್ರ ಹೋಟೆಲ್‌ಗಳಲ್ಲಿ ಲಾಬಿಯಲ್ಲಿ ಕುಳಿತರೂ ಸಹ ಪ್ರತಿ ಗಂಟೆಗೆ ಸಾವಿರ ರೂಪಾಯಿ ಶುಲ್ಕ ವಿಧಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ.
ಜೊತೆಗೆ ಕನಿಷ್ಠ ಆಹಾರ ಆರ್ಡರ್ ಕಡ್ಡಾಯ ಎಂಬ ನಿಯಮವೂ ಇದೆ. ಇದೇ ಮಾದರಿಯಲ್ಲಿ ನಗರಾದ್ಯಂತ ಇರುವ ಸಣ್ಣ ಹಾಗೂ ಮಧ್ಯಮ ಹೋಟೆಲ್‌ಗಳಲ್ಲಿಯೂ ‘ಟೇಬಲ್ ಚಾರ್ಜ್’ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಸಲಹೆಗಳು ಕೇಳಿಬರುತ್ತಿವೆ.
ಪಾರ್ಕಿಂಗ್ ಚಾರ್ಜ್ ಇರುವಂತೆ, ನಿರ್ದಿಷ್ಟ ಸಮಯ ಮೀರಿದರೆ ಟೇಬಲ್ ಚಾರ್ಜ್ ವಿಧಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಅಸೋಸಿಯೇಷನ್ ಮುಂದೆ ಇಡಲಾಗಿದೆ.
ಈ ಬಗ್ಗೆ ಹೋಟೆಲ್ ಅಸೋಸಿಯೇಷನ್ ಪ್ರತಿಕ್ರಿಯೆ ನೀಡಿದ್ದು, ಎಲ್ಲ ಹಿತಾಸಕ್ತಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಟೀ, ಕಾಫಿ, ಉಪಹಾರ ಹಾಗೂ ಊಟಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಿ, ಅದನ್ನು ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಆದರೆ ಯಾವುದೇ ನಿರ್ಧಾರವನ್ನು ಹಠಾತ್ ಜಾರಿಗೊಳಿಸುವುದಿಲ್ಲ, ಗ್ರಾಹಕರ ಅನುಕೂಲ ಹಾಗೂ ಹೋಟೆಲ್‌ಗಳ ವ್ಯವಹಾರ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಘ ಸ್ಪಷ್ಟಪಡಿಸಿದೆ.
ಮುಂದಿನ ದಿನಗಳಲ್ಲಿ ಈ ‘ಟೇಬಲ್ ಚಾರ್ಜ್’ (Table Charges) ವ್ಯವಸ್ಥೆ ಬೆಂಗಳೂರಿನ ಹೋಟೆಲ್ ಸಂಸ್ಕೃತಿಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಇದನ್ನು ಓದಿ : https://vijayatimes.com/new-draft-income-tax-rules/