ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ(Dog), ಮಾಲೀಕ ಹೇಳಿದ್ದಕ್ಕೆಲ್ಲಾ ನಾಯಿಗಳು ಚೆನ್ನಾಗಿ ಸ್ಪಂದಿಸೋದು ನಮಗೆಲ್ಲ ಗೊತ್ತು. ಅದಕ್ಕಿಂತ ಹೆಚ್ಚಿಗೆ ತನ್ನ ಮಾಲೀಕ ಅಥವಾ ಮನೆ ಮಂದಿ ಹೇಳಿದ್ದೆಲ್ಲವೂ ನಾಯಿಗೆ ಅರ್ಥವಾಗುತ್ತೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಹೌದು, ಶ್ವಾನಗಳು ಮನುಷ್ಯನ ಮಾತುಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ಮಾಡಲಾಗಿದೆ. ಹಂಗೇರಿಯ ಲೊರಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಶ್ವಾನಗಳ ಗ್ರಹಿಕೆಯ ಸಾಮರ್ಥ್ಯ, ಭಾಷೆ, ಅರ್ಥಮಾಡಿಕೊಳ್ಳುವ ರೀತಿಯ ಬಗ್ಗೆ ವಿವರವಾಗಿ ಸಮೀಕ್ಷೆ ಮಾಡಿದ್ದಾರೆ.

ನಿರ್ದಿಷ್ಟವಾದ ಧ್ವನಿ, ಏರಿಳಿತಗಳ ಮೂಲಕ ಶ್ವಾನಗಳು ಮಾನವನ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಒಂದು ವೇಳೆ ಮಾನವ ಗಟ್ಟಿಯಾದ ದನಿಯಲ್ಲಿ ಮಾತನಾಡುತ್ತಿದ್ದರೆ, ಅಥವಾ ಕೂಗಾಡಿದರೆ, ತನ್ನ ಮೇಲೆ ಯಾಕೋ ಅಸಮಾಧಾನವಾಗಿದೆ ಎಂದು ಶ್ವಾನಗಳು ಗ್ರಹಿಸಬಲ್ಲವಂತೆ. ಸಮೀಕ್ಷೆಗಾಗಿ ವಿವಿಧ ರೀತಿಯ ಧ್ವನಿ ಮಾದರಿಗಳನ್ನು ಶ್ವಾನಗಳ ಕಿವಿಗೆ ಕೇಳಿಸಿ ಪರಿಶೀಲಿಸಲಾಗಿದೆ. ಆ ಧ್ವನಿಗಳಿಗೆ ಶ್ವಾನಗಳ ಪ್ರತಿಕ್ರಿಯೆ ಏನು ಎಂಬುದನ್ನೂ ದಾಖಲಿಸಲಾಗಿದೆ. ವಿಶೇಷವಾಗಿ ತರಬೇತಿ ಕೇಂದ್ರಗಳಲ್ಲಿ ಶ್ವಾನಗಳು ವರ್ತಿಸುವ ಬಗೆಯನ್ನು ದಾಖಲಿಸಲಾಗಿದೆ.
ಎಮ್ ಆರ್ಐ ಸ್ಕ್ಯಾನ್ ಮೂಲಕ ಅವುಗಳ ಮೆದುಳಿನಲ್ಲಾಗುವ ವ್ಯತ್ಯಾಸವನ್ನು ಕೂಡ ಕಂಡುಹಿಡಿಯಲಾಗಿದೆ. ಸಾಧಾರಣ ನಾಯಿಗಳು ಕೂಡ 2 ವರ್ಷದ ಮಕ್ಕಳಷ್ಟು ಐಕ್ಯೂ ಹೊಂದಿರುತ್ತವಂತೆ. ಇದನ್ನ ಭಾಷೆ ಕಲಿಸುವ ಪರೀಕ್ಷೆ ಮಾಡುವ ಮೂಲಕ ಕಂಡು ಹಿಡಿಯಲಾಯಿತು. ಸಾಧಾರಣ ನಾಯಿಗಳು ಸರಾಸರಿ 165 ಶಬ್ದಗಳನ್ನ ಕಲಿಯಬಲ್ಲವು, ಎಂದರೆ ಅದು 2 ವರ್ಷದ ಮಕ್ಕಳ ಬುದ್ಧಿ ಶಕ್ತಿಗೆ ಸಮವಾಗಿದೆ. ಅದರಲ್ಲೂ ಅತಿ ಬುದ್ಧಿವಂತ ಮೇಲು ಸ್ಥರದ ನಾಯಿಗಳು ಸರಾಸರಿ 250 ಶಬ್ದಗಳನ್ನ ನೆನಪಿಡುತ್ತವೆ.

ಹೆಚ್ಚಿನ ಬುದ್ಧಿಮತ್ತೆ ಹೊಂದಿರುವ ತಳಿಗಳು, ಬಾರ್ಡರ್ ಕೊಲಿಸ್, ಪೂಡಲ್ಸ್, ಜರ್ಮನ್ ಶೆಫರ್ಡ್ಸ್ ಇವುಗಳು ಬಹಳ ಸ್ಮಾರ್ಟ್ ಎಂದು ಬ್ರಿಟಿಷ್ ಕೊಲಂಬಿಯ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಹಾಗೂ ಕೋರೆ ಹಲ್ಲು ತಜ್ಞರಾಗಿರುವ ಸ್ಟಾನ್ಲಿ ಕೊರಿಯೆನ್ ಹೇಳುತ್ತಾರೆ. ಅವರ ಪ್ರಕಾರ ಈ ತಳಿಯ ನಾಯಿಗಳು ಇತ್ತೀಚೀನದ್ದಾಗಿದ್ದು, ಬೇರೆ ತಳಿಗಳಿಗೆ ಹೋಲಿಸಿದರೆ ಹೆಚ್ಚಿನ ಬುದ್ಧಿಮತ್ತೆಯನ್ನು ಹೊಂದಿರುತ್ತವೆ, ಏಕೆಂದರೆ ಅವುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ, ಜೊತೆಗೆ ಗ್ರಹಿಸುವ ಶಕ್ತಿಯೂ ಇವುಗಳಲ್ಲಿ ಹೆಚ್ಚಾಗಿರುತ್ತದೆ.
ಸಂಶೋಧಕರ ಪ್ರಕಾರ ಈ ಬುದ್ಧಿವಂತ ನಾಯಿಗಳ ಬುದ್ಧಿಮತ್ತೆ 2.5 ವರ್ಷದ ಮಕ್ಕಳ ಬುದ್ದಿ ಮಟ್ಟಕ್ಕೆ ಸಮವಾಗಿರುತ್ತಂತೆ.