ಶಿವಣ್ಣ ನಟನೆಯ ‘ಬೈರಾಗಿ’(Bairagi) ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಎಂಟು ತಿಂಗಳ ಅಂತರದ ಬಳಿಕ ಬಿಡುಗಡೆಯಾಗಿದೆ ಶಿವರಾಜ್ಕುಮಾರ್(Shivarajkumar) ಅವರ 123 ನೇ ಚಿತ್ರ ಬೈರಾಗಿ. ಟಗರು ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್(Dolly Dhananjaya) ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ‘ಬೈರಾಗಿ’. ಶಿವರಾಜ್ ಕುಮಾರ್ ಹಾಗೂ ಧನಂಜಯ್ ಕಾಂಬಿನೇಶನ್ ಬಗ್ಗೆ ಪ್ರೇಕ್ಷಕರಲ್ಲಿ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿತ್ತು.
ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸದೇ, ಇಬ್ಬರೂ ವಿಭಿನ್ನ ಗೆಟಪ್ ಮೂಲಕ ಮೋಡಿ ಮಾಡಿದ್ದಾರೆ. ಚಿತ್ರದ ಬಿಡುಗಡೆಗೂ ಮೊದಲೇ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ಸದ್ದು ಮಾಡಿತ್ತು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.
ಸಿನಿಮಾ ಕಥೆಯ ಎಳೆ ಹೀಗಿದೆ. “ಭೈರಾಗಿ” ಆ್ಯಕ್ಷನ್ ಡ್ರಾಮಾ ಜಾನರ್ನ ಸಿನಿಮಾವಾಗಿದೆ. ಚಿತ್ರದಲ್ಲಿ ಶಿವರಾಜ್ಕುಮಾರ್ ಮತ್ತು ಧನಂಜಯ ಅವರ ಲುಕ್ಗಳು ವಿಭಿನ್ನವಾಗಿವೆ. ಶಿವರಾಜ್ಕುಮಾರ್ಗೆ ತಮಿಳಿನ ಅಂಜಲಿ ನಾಯಕಿಯಾದರೆ, ಧನಂಜಯ ಅವರಿಗೆ ಯಶಾ ಶಿವಕುಮಾರ್ ಜೋಡಿಯಾಗಿದ್ದಾರೆ.
ಫಸ್ಟ್ ಹಾಫ್ನಲ್ಲಿಯೇ ಶಿವಣ್ಣ ಎರಡು ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮೊದಲು ವೈಲೆಂಟ್ ಆಗಿ ಕಾಣಿಸಿಕೊಳ್ಳುವ ಶಿವಣ್ಣ, ನಂತರ ಸೈಲೆಂಟ್ ಆಗ್ತಾರೆ. ಇದಕ್ಕೆ ಕಾರಣವೇನು ಎನ್ನುವುದನ್ನು ತೆರೆಯ ಮೇಲೆ ನೋಡಬೇಕು. ಪೃಥ್ವಿ ಅಂಬಾರ್ ಅವರು ಕರಾವಳಿ ಹುಡುಗನಾಗಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ, ಕರಾವಳಿ ಸೊಗಡಿನ ಭಾಷೆ ಮತ್ತು ಪಂಚಿಂಗ್ ಡೈಲಾಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮೊದಲಾರ್ಧದ ಕಥೆ ಕಾಮಿಡಿ ಟ್ರ್ಯಾಕ್ನಲ್ಲಿಯೇ ಸಾಗುತ್ತದೆ, ಇದರಿಂದ ಅಭಿಮಾನಿಗಳನ್ನು ರಂಜಿಸುವಲ್ಲಿ ಫಸ್ಟ್ ಹಾಫ್ ಯಶಸ್ವಿಯಾಗಿದೆ.
ಆದರೆ, ಇಂಟರ್ವಲ್ ಗೂ ಮುಂಚೆ ಬರುವ ಒಂದು ದೃಶ್ಯದಿಂದಾಗಿ ದ್ವಿತೀಯಾರ್ಧದಲ್ಲಿ ಕಥೆ ಎತ್ತ ಸಾಗಬಹುದು ಎಂಬ ಕೌತುಕ ಮೂಡುತ್ತದೆ. ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅನು ಪ್ರಭಾಕರ್, ಚಿಕ್ಕಣ್ಣ ಹೀಗೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ. ಅನೂಪ್ ಸೀಳಿನ್ ಸಂಗೀತ ಗಮನ ಸೆಳೆಯುತ್ತದೆ. ಇನ್ನು, ಶಿವಣ್ಣ ಅಭಿನಯದ ಬೈರಾಗಿ ಚಿತ್ರವನ್ನು ಜುಲೈ 1 ರಂದೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಕ್ಕೆ ಕಾರಣವಿದೆ.
ಜುಲೈ 12ರಂದು ಶಿವಣ್ಣ 60 ನೇ ವರ್ಷಕ್ಕೆ ಕಾಲಿಡುತ್ತಿದ್ದು, ಶಿವಣ್ಣ ಹುಟ್ಟುಹಬ್ಬದ ಗಿಫ್ಟ್ ಅನ್ನು 2 ವಾರ ಮೊದಲೇ ನೀಡುವ ಪ್ಲಾನ್ ಚಿತ್ರತಂಡದ್ದು.
- ಪವಿತ್ರ ಸಚಿನ್