ಲಂಡನ್: ಚೀನಾ ವಿರುದ್ಧ ಅಮೆರಿಕ ಹೆಣೆಯುತ್ತಿರುವ ಜಾಗತಿಕ ಮಟ್ಟದ ಸಮರದಲ್ಲಿ ಮಹತ್ವದ ಬೆಳವಣಿಗೆ ವರದಿಯಾಗಿದ್ದು, ಅಮೆರಿಕಾದ ಒತ್ತಡಕ್ಕೆ ಬ್ರಿಟನ್ ಮಣಿದಿದೆ.
ಚೀನಾದ ಎಚ್ಚರಿಕೆಯ ನಂತರವೂ ಟೆಲಿಕಾಮ್ ದೈತ್ಯ ಹುವಾಯಿ ಸಂಸ್ಥೆಯನ್ನು ಬ್ರಿಟನ್ ತನ್ನ 5ಜಿ ಯೋಜನೆಯಿಂದ ತೆಗೆದುಹಾಕಿದೆ.
ಬ್ರಿಟನ್ ನ ರಾಜಕೀಯ ನಿರ್ಧಾರ, ಚೀನಾ ವಿರುದ್ಧ ಜಾಗತಿಕ ಮಟ್ಟದ ಭೌಗೋಳಿಕ-ರಾಜಕೀಯ ಸಮರ ಸಾರಿರುವ ಅಮೆರಿಕಾದ ಬಹುದಿನಗಳ ನಿರೀಕ್ಷೆಯಾಗಿತ್ತು.
“ಬ್ರಿಟನ್ ನ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಶ್ವೇತ ಭವನ, “ಈ ನಿರ್ಧಾರ ಚೀನಾದ ಹುವಾಯಿ ಮತ್ತಿತರ ಸಂಸ್ಥೆಗಳು ವಿಶ್ವಾಸಾರ್ಹವಲ್ಲದ ಮಾರಾಟಗಾರರು ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಉಪಕೃತವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಮಾರಕವಾಗಿದೆ ಎಂಬ ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ” ಎಂದು ಹೇಳಿದೆ.
ಆದರೆ ಬ್ರಿಟನ್ ಕಳೆದ 20 ವರ್ಷಗಳಿಂದ ಹುವಾಯಿ ಉಪಕರಣಗಳ ಮೇಲೆ ಅವಲಂಬಿತವಾಗಿದ್ದು, ಬ್ರಿಟನ್ ಮೊಬೈಲ್ ಪ್ರೊವೈಡರ್ ಗಳಿಗೆ ತಲೆನೋವಾಗಿ ಪರಿಣಮಿಸಲಿದೆ. ಇದನ್ನೇ ಚೀನಾ, “ಈ ನಿರ್ಧಾರ ಬ್ರಿಟನ್ ನ್ನು ಮುಂದಿನ ದಿನಗಳಲ್ಲಿ ಡಿಜಿಟಲ್ ಸ್ಲೋ ಲೇನ್ ಗೆ ದೂಡಲಿದೆ” ಎಂದು ಎಚ್ಚರಿಸಿದೆ.
ಲಂಡನ್ ನಲ್ಲಿರುವ ಚೀನಾದ ರಾಯಭಾರಿ ಲಿಯು ಶಿಯೋಮಿಂಗ್ ಈ ಬಗ್ಗೆ ಮಾತನಾಡಿದ್ದು, ಈ ನಿರ್ಧಾರವನ್ನು ನಿರಾಸೆ ಹಾಗೂ ತಪ್ಪು ನಿರ್ಧಾರ ಎಂದು ಹೇಳಿದ್ದಾರೆ. “ಬ್ರಿಟನ್ ವಿದೇಶಗಳ ಉದ್ಯಮ ಸಂಸ್ಥೆಗಳಿಗೆ ಉದ್ಯಮ ಸ್ನೇಹಿ ವಾತಾವರಣ ನೀಡಲಿದೆಯೇ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಕೌನ್ಸಿಲ್ ಹಾಗೂ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರದ ಪ್ರಕಾರ ಬ್ರಿಟನ್ ಟೆಲಿಕಾಂ ಸಂಸ್ಥೆಗಳು ಹುವಾಯಿ ಸಂಸ್ಥೆಯಿಂದ 5ಜಿ ಉಪಕರಣಾಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕಿದೆ.