ಇತ್ತೀಚೆಗೆ ಹುಬ್ಬಳ್ಳಿಯಲ್ಲಿ(Hubbali) ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಭಯಾನಕ ಮಾಹಿತಿ ಹೊರಬಿದ್ದಿದೆ. ಗಲಭೆ ಪೂರ್ವನಿಯೋಜಿತವಾಗಿದ್ದು, ಅತ್ಯಂತ ವ್ಯವಸ್ಥಿತವಾಗಿ ಜನರನ್ನು ಸಂಘಟಿಸಲಾಗಿತ್ತು. ಗಲಭೆ ವೇಳೆ ಪೊಲೀಸರನ್ನು ಹತ್ಯೆ ಮಾಡಲು ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಭಯಾನಕ ಮಾಹಿತಿ ಇದೀಗ ಹೊರಬಿದ್ದಿದೆ.

ಗಲಭೆ ವೇಳೆ ಪ್ರಮುಖವಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ಮೊದಲೇ ಯೋಜಿಸಲಾಗಿತ್ತು. ಪೊಲೀಸ್ ಠಾಣೆ(Police Station) ಮೇಲೆ ದಾಳಿ ಮಾಡಿ ಅಲ್ಲಿಯ ಪ್ರಮುಖ ಇಬ್ಬರು ಕಾನ್ಸ್ಟೇಬಲ್ಗಳನ್ನು ಹತ್ಯೆ ಮಾಡಲು ಕೆಲವು ಗಲಭೆಕೋರರು ಮೊದಲೇ ಪ್ಲ್ಯಾನ್ ಮಾಡಿದ್ದರು. ಅದೇ ರೀತಿ ವಿವಾದಿತ ಪೋಸ್ಟ್ ಹಾಕಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಭಿಷೇಕ ಹಿರೇಮಠನನ್ನು ಕೂಡ ಕೊಲೆ ಮಾಡಲು ಸಂಚುಕೋರರು ಪ್ಲ್ಯಾನ್ ಮಾಡಿದ್ದರು ಎಂಬ ಮಾಹಿತಿಯನ್ನು ಹುಬ್ಬಳ್ಳಿ ಪೊಲೀಸರು ಕಲೆ ಹಾಕಿದ್ದಾರೆ.
ಹುಬ್ಬಳ್ಳಿ ಗಲಭೆಯ ಪ್ರಮುಖ ಸೂತ್ರಧಾರ ವಾಸೀಂ ತನ್ನ ಎಂಟು ಜನ ಸಹಚರರೊಂದಿಗೆ ತಲೆಮರೆಸಿಕೊಂಡಿದ್ದಾನೆ. ಗಲಭೆಗೂ ಮುನ್ನ ವಾಸೀಂ ಪಠಾಣ್, ಇರ್ಪಾನ್ ಮತ್ತು ಮೊಹಮ್ಮದ್ ಆರಿಫ್ ಜನರನ್ನು ಸೇರಿಸಿದ್ದರು. ‘ಹುಬ್ಬಳ್ಳಿ ಕಿಂಗ್ಸ್’ ಎಂಬ ವಾಟ್ಸ್ಪ್ ಗ್ರೂಪ್ ಮೂಲಕ ವಾಸೀಂ ಪಠಾಣ್ ಪೊಲೀಸ್ ಠಾಣೆಯ ಮುಂದೆ ಜನರು ಬಂದು ಸೇರಬೇಕೆಂದು ಕರೆ ನೀಡಿದ್ದನು. ಠಾಣೆಯ ಮುಂದೆ ಕೋಮು ಪ್ರಚೋಧನೆ ಭಾಷಣ ಮಾಡಿದ್ದನು. ಉದ್ರೀಕ್ತರು ಪೊಲೀಸರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗ ಕೆಲವರಿಗೆ ಪೊಲೀಸರನ್ನು ಹತ್ಯೆ ಮಾಡಲು ಮೊದಲೇ ಸೂಚನೆ ನೀಡಲಾಗಿತ್ತು.

ಗಲಭೆಯೂ ಇಡೀ ಹುಬ್ಬಳ್ಳಿಯ ಗಲ್ಲಿಗಲ್ಲಿಯನ್ನು ಆವರಿಸುವಂತೆ ಮಾಡಲು ಕೂಡಾ ಮೊದಲೇ ಪ್ಲ್ಯಾನ್ ಮಾಡಲಾಗಿತ್ತು. ಅದಕ್ಕಾಗಿ ಮಾರಕಾಸ್ತ್ರಗಳನ್ನು ಮತ್ತು ತೂರಲು ಕಲ್ಲುಗಳನ್ನು ತರಿಸಲಾಗಿತ್ತು. ಅದೇ ರೀತಿ ಹುಬ್ಬಳ್ಳಿಯ ಒರ್ವ ಮುಸ್ಲಿಂ ಕಾರ್ಪೊರೇಟರ್ ಕೂಡಾ ಗಲಭೆಗೆ ಜನರನ್ನು ಒದಗಿಸಿದ್ದ ಎನ್ನಲಾಗಿದೆ. ಇನ್ನು ಈ ಗಲಭೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 108 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ ಕೂಡಾ ಈ ಪ್ರಕರಣದ ತನಿಖೆ ನಡೆಸುತ್ತಿದೆ.