ಹುಬ್ಬಳ್ಳಿಯಲ್ಲಿ(Hubbali) ನಡೆದ ಕೋಮು ಗಲಭೆಗೆ(Fights) ಸಂಬಂಧಿಸಿದಂತೆ ಪೋಲಿಸರು ಅನೇಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಈ ಘಟನೆಯೂ ಪೂರ್ವನಿಯೋಜಿತವಾಗಿದ್ದು, ಗಲಭೆಗೆ ಪ್ರಚೋದನೆ ನೀಡಿದ ಪ್ರಮುಖ ಸೂತ್ರಧಾರರನ್ನು ಬಂಧಿಸಲು ಹುಬ್ಬಳ್ಳಿ ಪೋಲಿಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ದೊರಕಿದ ಮಾಹಿತಿ ಆಧಾರದ ಮೇಲೆ ಮಸೀದಿಯ ಮೌಲ್ವಿ ವಾಸಿಂ ಈ ಗಲಭೆಗೆ ಪ್ರಮುಖ ಕಾರಣ ಎಂದು ಪೋಲಿಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಹುಬ್ಬಳ್ಳಿ ಗಲಭೆಯ ಪ್ರಮುಖ ಸೂತ್ರಧಾರ ಎನ್ನಲಾಗುತ್ತಿರುವ ಮೌಲ್ವಿ ವಾಸಿಂ ತನ್ನ ಪ್ರಮುಖ ಎಂಟು ಜನ ಸಹಚರರೊಂದಿಗೆ ಹೈದ್ರಾಬಾದ್‍ಗೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಮಾಲ್ವಿ ವಾಸಿಂ ಜಾಡು ಹಿಡಿದು ಬೆನ್ನತ್ತಿರುವ ಹುಬ್ಬಳ್ಳಿ ಪೋಲಿಸರು ಹೈದ್ರಾಬಾದ್ ಪೋಲಿಸರೊಂದಿಗೆ ಸಂಪರ್ಕದಲ್ಲಿದ್ದು, ಆರೋಪಿ ಪತ್ತೆಗೆ ತೀವ್ರ ಪ್ರಯತ್ನ ನಡೆಸಿದ್ದಾರೆ.
ಹುಬ್ಬಳ್ಳಿ ಪೋಲಿಸರೊಂದಿಗೆ ಕೇಂದ್ರ ಅಪರಾಧ ದಳ ಕೂಡಾ ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಇನ್ನು ಪೋಲಿಸರು ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ಕೆಲ ಪ್ರಮುಖ ಸಂಗತಿಗಳು ಹೊರಬಿದ್ದಿವೆ. ಗಲಭೆಯೂ ಪೂರ್ವನಿಯೋಜಿತ ಕೃತ್ಯವಾಗಿದ್ದು, ಪೋಲಿಸ್ ಠಾಣೆ ಮತ್ತು ಆಸ್ಪತ್ರೆಯ ಮೇಲೆ ದಾಳಿ ಮಾಡಲು ಮೊದಲೇ ಸಂಚು ರೂಪಿಸಲಾಗಿತ್ತು. ವಾಟ್ಸಪ್ ಸ್ಟೇಟಸ್ ಹಾಕಿದ್ದ ಆರೋಪಿಯನ್ನು ಬಂಧಿಸಿದ ನಂತರವೂ ಮೌಲ್ವಿ ವಾಸಿಂ ತನ್ನ ಸಹಚರರೊಂದಿಗೆ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ಎದುರು ಹೈಡ್ರಾಮಾ ನಡೆಸಿದ್ದ, ಇದೇ ವೇಳೆ ಉದ್ರಿಕ್ತರನ್ನು ಉದ್ದೇಶಿಸಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದ ಎನ್ನಲಾಗುತ್ತಿದೆ.
ಈ ಬಗ್ಗೆ ಪೋಲಿಸರು ವಿಡಿಯೋ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ಗಲಭೆಯ ಹಿಂದೆ ಇನ್ನಷ್ಟು ಕಾಣದ ಕೈಗಳು ಕೆಲಸ ಮಾಡಿದ್ದು ಅದರ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ. ಇಡೀ ಗಲಭೆಯನ್ನು ವ್ಯವಸ್ಥಿತವಾಗಿ ನಡೆಸಲಾಗಿದ್ದು ಹಿಂದೂ ಧರ್ಮಿಯರ ಮನೆ, ಆಸ್ತಿಪಾಸ್ತಿಗಳು ಮತ್ತು ದೇವಸ್ಥಾನಗಳನ್ನೇ ಗಲಭೆಕೋರರು ಟಾರ್ಗೆಟ್ ಮಾಡಿದ್ದು, ಮೆಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ ಎಲ್ಲ ಆಯಾಮಗಳಿಂದ ತನಿಖೆ ನಡೆಸಲು ಪೋಲಿಸರು ಮುಂದಾಗಿದ್ದಾರೆ. ರಾಷ್ಟ್ರೀಯ ತನಿಖಾ ದಳ ಕೂಡಾ ಈ ಪ್ರಕರಣವನ್ನು ಪರಿಶೀಲನೆ ನಡೆಸುತ್ತಿದೆ.