ತೆಲಂಗಾಣದ(Telangana) ನಿಜಾಮಾಬಾದ್(Nizamabad) ಜಿಲ್ಲೆಯಲ್ಲಿ ಗರ್ಭಿಣಿ(Pregnant) ಮಹಿಳೆಯೊಬ್ಬರು ಬುಧವಾರ, ಏಪ್ರಿಲ್ 27 ರಂದು ಸಾವನ್ನಪ್ಪಿದ್ದಾರೆ.
ಮೃತ ಗರ್ಭಿಣಿಯ ಪತಿ ಶೌಚಾಲಯವನ್ನು ಸ್ವಚ್ಛಗೊಳಿಸುವ ಆಸಿಡ್(Cleaner Acid) ತಂದು ಅದನ್ನು ಕುಡಿಯಲು ಒತ್ತಾಯಿಸಿದ ಮೇರೆಗೆ ಪತ್ನಿ ಕುಡಿದು ಸಾವನ್ನಪ್ಪಿದ್ದಾಳೆ. ನಿಜಾಮಾಬಾದ್‌ನ ವರ್ಣಿ ಮಂಡಲದ ರಾಜಪೇಟ್ ತಾಂಡಾದಲ್ಲಿ ಈ ಘಟನೆ ನಡೆದಿದೆ. ಆರೋಪಿಗಾಗಿ ಪೊಲೀಸ್ ಹುಡುಕುವಷ್ಟರಲ್ಲೇ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಿ ಬಲೆ ಬೀಸಿದ್ದಾರೆ. ಪತಿ ತರುಣ್ ಮೃತ ಕಲ್ಯಾಣಿಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ.
ಪ್ರಮುಖ ಮಾಧ್ಯಮದ ವರದಿಯ ಪ್ರಕಾರ, ಮೂರು ತಿಂಗಳ ಹಿಂದೆ, ಕಲ್ಯಾಣಿ ಗರ್ಭಿಣಿಯಾದಾಗ, ತರುಣ್ ಹೆಂಡತಿ ನೋಡಲು ಅಂದವಾಗಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಆಕೆಯ ಕುಟುಂಬದಿಂದ ಹೆಚ್ಚಿನ ವರದಕ್ಷಿಣೆ ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಎಂದು ವರ್ಣಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳವಾರ ಇಬ್ಬರ ನಡುವೆ ವಾಗ್ವಾದ ನಡೆದ ನಂತರ ತರುಣ್ ಕಲ್ಯಾಣಿಗೆ ಶೌಚಾಲಯ ಕ್ಲೀನಿಂಗ್ ಲಿಕ್ವಿಡ್ ಕುಡಿಯುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ.
ಆಕೆ ತೀವ್ರ ಅಸ್ವಸ್ಥಗೊಂಡ ಹಿನ್ನಲೆ ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ನಿಜಾಮಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾಳೆ. ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದು, ಶೌಚಾಲಯ ಸ್ವಚ್ಛಗೊಳಿಸುವ ದ್ರವ ಸೇವಿಸುವಂತೆ ಒತ್ತಾಯಿಸಿ ಕೊಲೆ ಮಾಡಿದ್ದಾರೆ ಎಂದು ಕಲ್ಯಾಣಿ ಸಂಬಂಧಿಕರು ತರುಣ್ ಮತ್ತು ಆತನ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ತರುಣ್ ಮತ್ತು ಅವರ ಕುಟುಂಬದ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 304-ಬಿ ಮತ್ತು 498-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಸದ್ಯ ನಾಪತ್ತೆಯಾಗಿದ್ದು, ಅವನನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.