ಬೆಂಗಳೂರು, ಡಿ. 31: ಇತ್ತೀಚಿಗೆ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಹಾಗೂ ನ್ಯೂಜಿ಼ಲೆಂಡ್-ಪಾಕಿಸ್ತಾನ ತಂಡಗಳ ನಡುವಿನ ಟೆಸ್ಟ್ ಪಂದ್ಯದ ಬಳಿಕ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರೀ ಬದಲಾವಣೆಯಾಗಿದ್ದು, ಕಿವೀಸ್ ನಾಯಕ ಕೇನ್ ವಿಲಿಯಂಸನ್ ನಂ.1 ಸ್ಥಾನಕ್ಕೇರಿದ್ದಾರೆ.
ಪ್ರವಾಸಿ ಪಾಕಿಸ್ತಾನ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೇನ್ ವಿಲಿಯಂಸನ್ ಶತಕ ಬಾರಿಸಿ ಮಿಂಚಿದ್ದರಲ್ಲದೇ, ತಂಡದ ಗೆಲುವಿಗೆ ಕಾರಣರಾಗಿದ್ದರು. ಪರಿಣಾಮ ಭಾರತ ವಿರುದ್ಧದ 2 ಟೆಸ್ಟ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿರುವ ವಿಲಿಯಂಸನ್, ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ಪಯಣದಲ್ಲಿ 2ನೇ ಬಾರಿಗೆ ನಂ.1 ಸ್ಥಾನ ಪಡೆದಿರುವ ವಿಲಿಯಂಸನ್, ಈ ಹಿಂದೆ 2015ನೇ ಸಾಲಿನ ಅಂತ್ಯದಲ್ಲಿ ಅಗ್ರಸ್ಥಾನ ಪಡೆದಿದ್ದರು. ಉಳಿದಂತೆ ಕೊಹ್ಲಿ 2ನೇ ಸ್ಥಾನ, ಸ್ಮಿತ್ 3ನೇ ಸ್ಥಾನದಲ್ಲಿದ್ದಾರೆ.
ಇನ್ನೂ, ಮೆಲ್ಬೋರ್ನ್ ಅಂಗಳದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ, 6ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತದ ಆರ್. ಅಶ್ವಿನ್(7ನೇ ಸ್ಥಾನ), ಜಸ್ಪ್ರೀತ್ ಬುಮ್ರಾ(9ನೇ ಸ್ಥಾನ) ಪಡೆದಿದ್ದರೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ 5ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.