ನವದೆಹಲಿ, ಮೇ. 24: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಈಗಿರುವ ಲಾಕ್ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಿಸಿದ್ದಾರೆ. ಪ್ರಕರಣಗಳು ಕಡಿಮೆಯಾದರೆ ಮತ್ತು ಜನರು ಈಗಿರುವ ನಿಬಂಧನೆಗಳನ್ನು ಅನುಸರಿಸುತ್ತಿದ್ದರೆ ಮಾತ್ರ ಮೇ 31 ರಿಂದ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಮತ್ತು ಸಕಾರಾತ್ಮಕ ದರಗಳು ಕಡಿಮೆಯಾಗುತ್ತಿದ್ದರೂ ದೆಹಲಿ ಸರ್ಕಾರವು ನಡೆಯುತ್ತಿರುವ ಲಾಕ್ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಿಸುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಶನಿವಾರ ವರದಿ ಮಾಡಿತ್ತು.
ದೆಹಲಿ ಸರ್ಕಾರವು ಏಪ್ರಿಲ್ 19 ರಂದು ಆರಂಭಿಕ ಲಾಕ್ಡೌನ್ ಅನ್ನು ವಿಧಿಸಿತ್ತು. ಸದ್ಯಕ್ಕೆ, ಮೇ 31 ರಂದು ಬೆಳಿಗ್ಗೆ 5 ಗಂಟೆಯವರೆಗೆ ಲಾಕ್ಡೌನ್ ಜಾರಿಯಲ್ಲಿರುತ್ತದೆ ಮತ್ತು ಅನ್ಲಾಕ್ ಪ್ರಕ್ರಿಯೆಯು ಸಹ ನಿಧಾನವಾಗಲಿದೆ ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿಯಲ್ಲಿ ಭಾನುವಾರ 1,600 ಕೊವಿಡ್ ಹೊಸ ಪ್ರಕರಣಗಳು ದಾಖಲಾಗಿವೆ .ಇದು ಮಾರ್ಚ್ 1 ರ ನಂತರದ ಕನಿಷ್ಠ ದೈನಂದಿನ ಪ್ರಮಾಣವಾಗಿದೆ. ಪಾಸಿಟಿವಿಟಿ ಪ್ರಮಾಣವು ಮತ್ತಷ್ಟು ಕುಸಿದಿದ್ದು ಈಗ ಅದು ಶೇ 2.5 ರಷ್ಟಿದೆ.
ಎಲ್ಲರಿಗೂ ಲಸಿಕೆ ಹಾಕಿದರೆ ಮೂರನೇ ಅಲೆಯ ಹೊಡೆತಕ್ಕೆ ಹೆದರುವಂತಿಲ್ಲ. ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಹಾಕಲು ಚಿಂತಿಸುತ್ತಿದ್ದೇವೆ . ಲಸಿಕೆಗಳಿಗೆ ಸಂಬಂಧಿಸಿದಂತೆ ನಾನು ದೇಶದ ಮತ್ತು ವಿದೇಶಿ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ನಮ್ಮ ಬಜೆಟ್ನಿಂದ ಖರ್ಚು ಮಾಡಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ ಕೇಜ್ರಿವಾಲ್.