ಬೆಂಗಳೂರು, ಮೇ. 31: ಆ್ಯಂಬುಲೆನ್ಸ್ ಸೇವೆಗೆ ಸಾರ್ವಜನಿಕರಿಂದ ಅಧಿಕ ಶುಲ್ಕ ಪಡೆದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕೋವಿಡ್ ರೋಗದಿಂದ ತೊಂದರೆಗೆ ಒಳಗಾಗಿರುವ ಸೋಂಕಿತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಆ್ಯಂಬುಲೆನ್ಸ್ ಸೇವೆಗೆ ಸರ್ಕಾರ ಸೂಕ್ತ ದರ ನಿಗದಿಪಡಿಸಿದ್ದು, ಆ ಪ್ರಕಾರವೇ ಅಂಬುಲೆನ್ಸ್ ಸೇವೆಗೆ ಅಂಬುಲೆನ್ಸ್ ವಾಹನಗಳ ಮಾಲೀಕರು ದರ ವಿಧಿಸಬೇಕಿದೆ.
ಆದರೆ, ಕೆಲವು ಪ್ರಕರಣಗಳಲ್ಲಿ ಅಂಬುಲೆನ್ಸ್ ಸೇವೆಗೆ ಸಾರ್ವಜನಿಕರಿಂದ ಅಧಿಕ ಶುಲ್ಕ ಸಂಗ್ರಹಿಸುತ್ತಿರುವ ಆರೋಪ ವ್ಯಕ್ತವಾಗಿವೆ. ಇದು ಸರಿಯಲ್ಲ. ಒಂದು ವೇಳೆ ಸರ್ಕಾರದ ನಿಗದಿಪಡಿಸಿರುವ ದರಕ್ಕಿಂತಲೂ ಹೆಚ್ಚು ಹಣವನ್ನು ಯಾರೇ ಸಂಗ್ರಹಿಸಿ ನಿಯಮ ಉಲ್ಲಂಘಿಸಿದರೂ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಸಿದ್ದಾರೆ.
ಅಲ್ಲದೇ, ಕೋವಿಡ್ ಪಿಡುಗನ್ನು ತಡೆಯುವ ಪ್ರಯತ್ನದ ಅಂಗವಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸಾರಿಗೆ ಸೇವೆ, ಅಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ಸ್ಪಂದಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
ಈ ಸಹಾಯವಾಣಿಯ ನಂಬರ್ 9449 86 3214. ವಿಳಾಸ: ಸಾರಿಗೆ ಆಯುಕ್ತರ ಕಛೇರಿ, 1ನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು- 27. ಸಾರಿಗೆ ಸೇವೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಕುಂದುಕೊರತೆಗಳಿದ್ದಲ್ಲಿ ಸಾರ್ವಜನಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಿ ಉಪಯೋಗ ಪಡೆದುಕೊಳ್ಳಬಹುದು.