ಕಾಡು, ಎಲ್ಲಾ ನದಿಗಳ ತಾಯಿ(Forest is the mother all river)22 ಮಾರ್ಚ್ ವಿಶ್ವ ಜಲ ದಿನ(World Water Day). ಬಹುತೇಕ ನಮ್ಮಲ್ಲಿ ಜಲ ದಿನವನ್ನು ಬಿಟ್ಟು ಕೂಡ ಬಹಳ ಜನ ನೀರಿನ ಬಗ್ಗೆ ಕಾಳಜಿ ವಹಿಸುವುದನ್ನು ಕಾಣುತ್ತೇವೆ. ನಾನು ಕಂಡಂತೆ ಬಹುತೇಕ ಜನ ನೀರಿನ ಬಗ್ಗೆ ಕಾಳಜಿ ವಹಿಸುವಾಗ ಉಲ್ಲೇಖಿಸುವ ಅಂಶಗಳು ನೀರನ್ನು ವ್ಯರ್ಥ ಮಾಡಬೇಡಿ, ಯಾವುದೇ ನಲ್ಲಿಯಲ್ಲಿ ನೀರು ಸುರಿಯುತ್ತಿದ್ದರೇ ಹೋಗಿ ನಿಲ್ಲಿಸಿ, ನಲ್ಲಿಗಳಲ್ಲಿ ಹನಿಹನಿ ಸೀರುವ ನೀರನ್ನು ನಿಲ್ಲಿಸಿ, ಜಲ ಸಂರಕ್ಷಣೆಯಲ್ಲಿ ಕೈಜೋಡಿಸಿ, ಸ್ನಾನ ಮಾಡುವಾಗ ಒಂದು ಬಕೇಟ್ ಅಷ್ಟೆ ನೀರನ್ನು ಬಳಸಿ.

ವಿಷಯಗಳನ್ನು ಹೇಳುವುದನ್ನಷ್ಟೆ ಹೆಚ್ಚಾಗಿ ಕೇಳುತ್ತೇವೆ. ಆದರೆ ನೀರಿಗೆ ಮೂಲವಾದ ಕಾಡಿನ ಉಳಿವಿನ ಬಗ್ಗೆ, ಅಂತರ್ಜಲಕ್ಕೆ ಮೂಲ ಕೆರೆಕಟ್ಟೆಗಳ ಉಳಿವಿನ ಬಗ್ಗೆ ಬೇರೆ ಎಲ್ಲಾ ದಿನಗಳಲ್ಲೂ ಬೇಡ ಜಲದಿನದಂದೂ ಕೂಡ ಬಹುತೇಕ ಜನ ಮಾತನ್ನಾಡಲ್ಲ. ನದಿಗಳ ಉಳಿವಿನಲ್ಲೂ ಕೂಡ ಹೆಚ್ಚಿನ ಜನರು ಮುಖ್ಯ ವಿಚಾರ ಬಿಟ್ಟು ತಮಗೆ ಕಂಪರ್ಟ್ ಆದ ವಿಷಯಗಳಿಗೆ ಮಾತ್ರ ಆಧ್ಯತೆ ನೀಡುತ್ತಾರೆ. ಮೊದಲ ಸಾಲಿನಲ್ಲಿಯೇ ಹೇಳಿದಂತೆ ಕಾಡು ಎಲ್ಲಾ ನದಿಗಳ ತಾಯಿ. ಒಂದು ಅಂಕಿಅಂಶದ ಪ್ರಕಾರ ಭಾರತದಲ್ಲಿನ 300ಕ್ಕೂ ಅಧಿಕ ನದಿಗಳ ಉಗಮತಾಣವಿರುವುದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ.

ಹಾಗಾಗಿ ನದಿಗಳ ಸಂರಕ್ಷಣೆಯ ಅತ್ಯಂತ ಮಹತ್ವದ ಭಾಗ ಕಾಡುಗಳ ಸಂರಕ್ಷಣೆ. ಇದರ ಬಗ್ಗೆ ಜಾಣ ಕುರುಡು ತೋರುತ್ತಾ ವಿಚಾರಗಳಿಂದಲೇ ನದಿ ಪುನಶ್ಚೇತನಗೊಳಿಸುತ್ತೇನೆ ಎನ್ನುವುದು ಸುಳ್ಳು. ತಮಿಳುನಾಡಿನ ಕಾಲಕ್ಕಡ್ ಮುಂಡಥುರೈ ಅರಣ್ಯ ಭಾಗದಲ್ಲಿನ ತಮಿರಭರಣಿ ಎಂಬ ನದಿಯ ಮರುಹುಟ್ಟಿನ ಈ ಕತೆ ನೀರು ಹಾಗೂ ಸಹಜ ಕಾಡುಗಳ ನಡುವಿನ ಸಂಬಂಧಕ್ಕೆ ಜೀವಂತ ಸಾಕ್ಷಿಯಾಗಿದೆ ಎನ್ನಬಹುದು. ತಮಿಳುನಾಡಿನಲ್ಲಿಯೇ ಹುಟ್ಟಿ, ತಮಿಳುನಾಡಿನಲ್ಲಿಯೇ ಸಮುದ್ರ ಸೇರುವ ಪ್ರಮುಖ ನದಿಯಾಗಿದ್ದ, ತಮಿರಭರಣಿ ಕಾಲಕ್ರಮೇಣ ಭತ್ತಿಹೋಗಿತ್ತು.

ನಂತರ ಆ ನದಿ ಹುಟ್ಟುವ ಅರಣ್ಯ ಪ್ರದೇಶವಾದ ಕಾಲಕ್ಕಡ್ ಮುಂಡಂಥುರೈ ಅರಣ್ಯ ಪ್ರದೇಶವನ್ನು 1992 ರಲ್ಲಿ ಹುಲಿ ಮೀಸಲು ಪ್ರದೇಶವಾಗಿ ಘೋಷಿಸಿ, ಅಲ್ಲಿ ಕಟ್ಟುನಿಟ್ಟಿನ ಸಂರಕ್ಷಣಾ ಕ್ರಮಗಳನ್ನು ಕೈಗೊಂಡ ಸ್ವಲ್ಪ ವರ್ಷಗಳಲ್ಲಿ ತಮಿರಭರಣಿ ನದಿ ಮರುಹುಟ್ಟು ಪಡೆದುಕೊಳ್ಳುತ್ತದೆ. ಸಹಜ ಕಾಡಿನ ಸಂರಕ್ಷಣೆಯೊಂದಿಗೆ ನದಿ ಪುನಶ್ಚೇತನವಾಗಿ ರಕ್ಷಿಸಲ್ಪಟ್ಟಿತು.
- Source : ಸಂಜಯ್ ಹೊಯ್ಸಳ