ಇಮ್ರಾನ್ ಖಾನ್(Imran Khan) ನೇತೃತ್ವದ ಸರ್ಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿದೆ. ಇಮ್ರಾನ್ ಖಾನ್ ನೇತೃತ್ವದ ‘ಪಾಕಿಸ್ತಾನ್-ತೆಹ್ರೀಕ್-ಇನ್ಸಾಫ್’ ಪಕ್ಷಕ್ಕೆ ‘ಮುತಾಹಿತಾ-ಕ್ವಾಮಿ ಮೂವಮೆಂಟ್’ ಪಕ್ಷ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ. ಹೀಗಾಗಿ ಆಡಳಿತರೂಢ ಸರ್ಕಾರ ಬಹುಮತವನ್ನು ಕಳೆದುಕೊಂಡಿದೆ ಎಂದು ಪಾಕಿಸ್ತಾನ(Pakisthan) ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಟ್ವೀಟ್ ಮಾಡಿದ್ದಾರೆ.

ಇನ್ನು 342 ಸದಸ್ಯ ಬಲದ ಪಾಕಿಸ್ತಾನ ಪಾರ್ಲಿಮೆಂಟ್‍ನಲ್ಲಿ 172 ಸದಸ್ಯರ ಬೆಂಬಲ ಪಡೆಯುವುದು ಇಮ್ರಾನ್ ಖಾನ್‍ಗೆ ಅನಿವಾರ್ಯವಾಗಿತ್ತು. ಆದರೆ ಮುತಾಹಿತಾ-ಕ್ವಾಮಿ ಮೂವಮೆಂಟ್ ಪಕ್ಷದ 23 ಸದಸ್ಯರು ಇಮ್ರಾನ್ ಖಾನ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದು, ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಇನ್ನೊಂದೆಡೆ ಪಾಕಿಸ್ತಾನ್-ತೆಹ್ರೀಕ್-ಇನ್ಸಾಫ್ ಪಕ್ಷದ ಸದಸ್ಯರು ಕೂಡಾ ಸರ್ಕಾರದ ವಿರುದ್ದ ಬಂಡಾಯ ಘೋಷಿಸಿದ್ದಾರೆ.
ಇಮ್ರಾನ್ ಖಾನ್ ಆಡಳಿತದಲ್ಲಿ ಪಾಕಿಸ್ತಾನ ಅಧೋಗತಿಗೆ ಹೋಗಿದೆ, ಹೀಗಾಗಿ ನಾವು ನಮ್ಮ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುತ್ತೇವೆ ಎಂದು ಸುಮಾರು 24 ಸದಸ್ಯರು ಘೋಷಿಸಿದ್ದಾರೆ. ಹೀಗೆ ಸ್ವಪಕ್ಷದ ಸದಸ್ಯರ ಬೆಂಬಲವನ್ನು ಇಮ್ರಾನ್ ಕಳೆದುಕೊಂಡಿದ್ದಾರೆ. ಇನ್ನು ಮಾರ್ಚ್ 31ರಂದು ಪಾರ್ಲಿಮೆಂಟ್‍ನಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದ್ದು, ಏಪ್ರಿಲ್ 3ರಂದು ಮತದಾನ ನಡೆಯಲಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಕ್ ರಶೀದ್ ಹೇಳಿದ್ದಾರೆ.
ಇನ್ನು ಕಳೆದ ಕೆಲ ದಿನಗಳಿಂದ ಪಾಕಿಸ್ತಾನದಲ್ಲಿ ಆಡಳಿತರೂಢ ಪಾಕಿಸ್ತಾನ್-ತೆಹ್ರೀಕ್-ಇನ್ಸಾಫ್ ಪಕ್ಷದ ವಿರುದ್ದ ಪಾಕಿಸ್ತಾನ ನಾಗರಿಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಇಮ್ರಾನ್ ಖಾನ್ ಪ್ರಧಾನಿಯಾದ ನಂತರ ಪಾಕಿಸ್ತಾನ ಎಲ್ಲ ರಂಗದಲ್ಲೂ ಹಿನ್ನಡೆ ಅನುಭವಿಸುತ್ತಿದೆ.

ಭ್ರಷ್ಟಾಚಾರ ಮಿತಿಮೀರಿದೆ, ಆಡಳಿತ ಯಂತ್ರ ಅಸ್ತವ್ಯಸ್ಥಗೊಂಡಿದೆ. ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ಜನಸಾಮಾನ್ಯರ ಬದುಕು ಕಷ್ಟವಾಗಿದೆ ಹೀಗಾಗಿ ಇಮ್ರಾನ್ ಖಾನ್ ಜನಬೆಂಬಲ ಕಳೆದುಕೊಂಡಿದ್ದಾರೆ ಎಂದು ಪಾಕಿಸ್ತಾನ ಪಿಪಲ್ಸ್ ಪಾರ್ಟಿ ನಾಯಕ ಬಿಲಾವಲ್ ಭುಟ್ಟೋ ದೇಶಾದ್ಯಂತ ರ್ಯಾಲಿಗಳನ್ನು ನಡೆಸಿದ್ದರು. ಈ ಮೂಲಕ ಸರ್ಕಾರದ ವಿರುದ್ದ ಜನಾಭಿಪ್ರಾಯವನ್ನು ರೂಪಿಸಿದ್ದರು. ಇಮ್ರಾನ್ ಖಾನ್ ಸರ್ಕಾರ ಏಪ್ರಿಲ್ 3ರಂದು ಪತನವಾಗುವುದು ಬಹುತೇಕ ಖಚಿತವಾಗಿದೆ. ನಂತರ ಬಿಲಾವಲ್ ಭುಟ್ಟೋ ಸರ್ಕಾರ ರಚಿಸುವ ಸಾಧ್ಯತೆಗಳಿವೆ. ಆದರೆ ಸೇನಾಡಳಿತ ಜಾರಿಯಾದರು ಅಚ್ಚರಿ ಪಡಬೇಕಿಲ್ಲ.