ಆಫ್ರಿಕಾ ಜು 27: ಆಫ್ರಿಕನ್ ವಲಸಿಗರಿದ್ದ ಹಡಗು ಲಿಬಿಯಾದ ಕರಾವಳಿ ತೀರದಲ್ಲಿ ಮುಳುಗಿದ ಪರಿಣಾಮ ಸುಮಾರು 57 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಹಡಗು ಪಶ್ಚಿಮ ಕರಾವಳಿ ಪಟ್ಟಣ ಖುಮ್ಸ್ನಿಂದ ಭಾನುವಾರ ಹೊರಟಿತ್ತು ಎಂದು ಅಂತಾರಾಷ್ಟ್ರೀಯ ವಲಸೆ ಆರ್ಗನೈಸೇಶನ್ನ ವಕ್ತಾರೆ ಸಫಾ ಮೆಸೆಲಿ ತಿಳಿಸಿದ್ದಾರೆ.
ಹಡಗಿನಲ್ಲಿ ಮಕ್ಕಳು, ಮಹಿಳೆಯರು ಸೇರಿ ಸುಮಾರು 75 ವಲಸಿಗರು ಇದ್ದರು. ಅದರಲ್ಲಿ 57 ಜನರು ಮೃತಪಟ್ಟಿದ್ದು, 20 ಮಹಿಳೆಯರು, ಇಬ್ಬರು ಮಕ್ಕಳು ಸೇರಿದ್ದಾರೆಂದು ಮೆಸೆಲಿ ಹೇಳಿದ್ದಾರೆ. ಅಲ್ಲದೆ, ಉಳಿದ 18 ಜನರನ್ನು ಮೀನುಗಾರರು ರಕ್ಷಿಸಿದ್ದಾರೆಂದೂ ಮಾಹಿತಿ ನೀಡಿದ್ದಾರೆ.
ಹಡಗು ಮೊದಲು ಇಂಜಿನ್ ಸಮಸ್ಯೆಯಿಂದ ನಿಂತಿತ್ತು. ಆದರೆ ನಂತರ ಕೆಟ್ಟ ಹವಾಮಾನದ ಕಾರಣದಿಂದ ಮುಳುಗಿ ದುರಂತ ಸಂಭವಿಸಿದೆ. ಹೀಗೆ ಪ್ರಾಣಾಪಾಯದಿಂದ ಪಾರಾದವರಲ್ಲಿ ನೈಜೀರಿಯಾ, ಘಾನಾ, ಗಾಂಬಿಯಾದವರು ಇದ್ದಾರೆ ಎಂದು ಹೇಳಲಾಗಿದೆ.