ಕೊಲ್ಕತ್ತಾ, ಮೇ. 05: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲು ಕಾರಣವಾದ ಮಮತಾ ಬ್ಯಾನರ್ಜಿ ಮೂರನೇ ಬಾರಿ ಮುಖ್ಯಮಂತ್ರಿ ಗದ್ದುಗೆಗೇರಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಮತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಟ್ರೇಡ್ ಮಾರ್ಕ್ ಆಗಿರುವ ಬಿಳಿ ಸೀರೆಯುಟ್ಟು,ಶಾಲು ಹೊದ್ದು ಬಂಗಾಳಿ ಭಾಷೆಯಲ್ಲಿ ಮಮತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಶಾಸಕರು ರಬೀಂದ್ರನಾಥ ಟಾಗೋರರ ಜಯಂತಿಯಂದು ಮೇ 9ಕ್ಕೆ ಪ್ರಮಾಣವ ವಚನ ಸ್ವೀಕರಿಸಲಿದ್ದಾರೆ
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅಭಿನಂದನೆ ಸಲ್ಲಿಸಿದ ರಾಜ್ಯಪಾಲ ಜಗದೀಪ್ ಧನ್ಕರ್ , ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಮೂರನೇ ಬಾರಿ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿಗೆ ಅಭಿನಂದನೆಗಳು. ಸಮಾಜದ ಮೇಲೆ ಪರಿಣಾಮ ಬೀರಿರುವವ ಹಿಂಸಾಚಾರವನ್ನು ನಿಲ್ಲಿಸುವುದು ನಮ್ಮ ಆದ್ಯತೆಯಾಗಿರಬೇಕು. ಈ ಹಿಂಸಾಚಾರ ತಡೆಯಲು ಮುಖ್ಯಮಂತ್ರಿ ಶೀಘ್ರವೇ ಕ್ರಮಕೈಗೊಳ್ಳಲಿದ್ದು ರಾಜ್ಯ ದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಲಿ ಎಂದು ನಾನು ಆಶಿಸುತ್ತೇನೆ ಎಂದಿದ್ದಾರೆ.