ದೆಹಲಿ, ಮಾ. 09: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಫೆನಿ ನದಿಯ ಮೇಲೆ ಕಟ್ಟಲಾಗಿರುವ ಸೇತುವೆಯನ್ನು (Maitri Setu) ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಕಟ್ಟಲಾಗಿರುವ ಈ ಸೇತುವೆಗೆ ‘ಮೈತ್ರಿ ಸೇತು’ ಎಂದು ಹೆಸರಿಸಲಾಗಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸಂಪರ್ಕ ಬಲಪಡಿಸಲು, ನೆರೆಯ ದೇಶವನ್ನು ಪ್ರೋತ್ಸಾಹಿಸಲು, ವಿಶೇಷವಾಗಿ ಭಾರತದ ಈಶಾನ್ಯ ರಾಜ್ಯಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಈ ಕಾರ್ಯಕ್ರಮ ಸಹಾಯವಾಗಲಿದೆ ಎಂದು ಸೇತುವೆಯ ಉದ್ಘಾಟನೆಯ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಬಾಂಗ್ಲಾದೇಶ ಪ್ರಧಾನಿ ಶೈಕ್ ಹಸೀನಾ ಅಭಿಪ್ರಾಯ ಪಟ್ಟಿದ್ದಾರೆ.
‘ಮೈತ್ರಿ ಸೇತು’ ಎಂಬ ಹೆಸರು ಉಭಯ ದೇಶಗಳ ಸ್ನೇಹ ಸಂಬಂಧದ ಚಿಹ್ನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸೇತುವೆಯ ನಿರ್ಮಾಣ ಜವಾಬ್ದಾರಿಯನ್ನು National Highways & Infrastructure Development Corporation Ltdಗೆ ವಹಿಸಿತ್ತು. ಸುಮಾರು 133 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ ಎಂದು ಪ್ರಧಾನಿ ಕಛೇರಿ ಮಾಹಿತಿ ನೀಡಿದೆ.
ಮೈತ್ರಿ ಸೇತುವಿನ ವಿಶೇಷತೆಯೇನು?
ಭಾರತ-ಬಾಂಗ್ಲಾದೇಶ ಸಂಪರ್ಕಿಸುವ ಮೈತ್ರಿ ಸೇತು, 1.9 ಕಿ.ಮೀ. ಉದ್ದವಿದ್ದು, ಭಾರತದ ಸಬ್ರೂಮ್ನಿಂದ ಬಾಂಗ್ಲಾದೇಶದ ರಾಮ್ಘರ್ ನ್ನು ಸಂಪರ್ಕಿಸಲಿದೆ. ಈ ಸೇತುವೆಯ ಮೂಲಕ, ಭಾರತ ಹಾಗೂ ಬಾಂಗ್ಲಾದೇಶ ನಡುವೆ ವ್ಯಾಪಾರ, ಜನಸಂಪರ್ಕ, ಸರಕು ಸಾಗಾಟಕ್ಕೆ ಸಹಕಾರಿಯಾಗಲಿದೆ. ಹೊಸ ಮಾರುಕಟ್ಟೆ ಅವಕಾಶಗಳು, ಈಶಾನ್ಯ ರಾಜ್ಯಗಳ ಉತ್ಪನ್ನಗಳಿಗೆ ಮಾರಾಟ ಅವಕಾಶವೂ ದೊರೆಯಲಿದೆ.
ಈ ಸೇತುವೆಯ ಉದ್ಘಾಟನೆಯ ಮೂಲಕ, ಈಶಾನ್ಯ ರಾಜ್ಯ ತ್ರಿಪುರಾ ‘ಈಶಾನ್ಯ ಭಾಗದ ಹೆಬ್ಬಾಗಿಲು’ (Gateway of North East) ಆಗಲಿದೆ. ಅಲ್ಲಿಂದ ಬಾಂಗ್ಲಾದೇಶದ ಚಿತ್ತಗಾಂವ್ ಬಂದರಿಗೆ ಕೇವಲ 80 ಕಿ.ಮೀ. ಅಂತರವಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ಸಬ್ರೂಮ್ನಲ್ಲಿ ಚೆಕ್ ಪೋಸ್ಟ್ಗೂ ಶಿಲಾನ್ಯಾಸ ನೆರವೇರಿಸಿದ್ದಾರೆ.