ಬೆಂಗಳೂರು, ಮೇ. 13: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜೂನ್ 21ರಿಂದ ಆರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ಜೂನ್ 14ರಿಂದ ಜೂನ್ 25ರವರೆಗೂ ಹತ್ತನೇ ತರಗತಿ ಪರೀಕ್ಷೆಗಳು(SSLC Exams) ನಿಗದಿ ಪಡಿಸಿ, ದಿನಾಂಕ ಪ್ರಕಟಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಪರೀಕ್ಷೆಗೆ ಸಹಕಾರ ನೀಡಬೇಕಿದ್ದ ಇಲಾಖೆಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ಪರಿಣಾಮ ಪರೀಕ್ಷೆಯನ್ನು ಮುಂದೂಡಲಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ-ಪೋಷಕರ, ವಿವಿಧ ಶಾಲಾ ಸಂಘಟನೆಗಳ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೋವಿಡ್-19 ಎರಡನೇ ಅಲೆಯ ಸಂಪೂರ್ಣ ತಹಬಂದಿಗೆ ಬಂದ ನಂತರ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಲಾಗುವುದು. ಹೀಗಾಗಿ ಪರೀಕ್ಷೆ ತೆಗೆದುಕೊಳ್ಳಬೇಕಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನಲ್ಲಿ ವಾಸ್ತವ್ಯ ಹೂಡಿರುವ ಹಿನ್ನಲೆ ಈ ಕ್ರಮಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.