ದೆಹಲಿ, ಫೆ. 21: ದೇಶದಲ್ಲಿ ಮತ್ತೊಮ್ಮೆ ಕೊರೊನಾ ಸೋಂಕಿನ ಆತಂಕ ಎದುರಾಗಿದ್ದು, ಪ್ರಮುಖವಾಗಿ ಐದು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ, ಸ್ಥಳೀಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಪ್ರಮುಖವಾಗಿ ಕೋವಿಡ್ ಸೋಂಕಿತರ ಪತ್ತೆಗೆ RT-PCR ಪರೀಕ್ಷೆ ನಡೆಸುವಂತೆ ನಿರ್ದೇಶಿಸಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ದೇಶದ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಶೇ.74 ಏರಿಕೆಯಾಗಿದೆ. ಇದಲ್ಲದೆ ಛತ್ತಿಸ್ಗಡ್, ಮಧ್ಯಪ್ರದೇಶ, ಪಂಜಾಬ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಸಹ ದಿನನಿತ್ಯ ದಾಖಲಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಸಚಿವಾಲಯ ಎಚ್ಚರಿಸಿದೆ.
ಕೊರೊನಾ ಸೋಂಕು ಹೆಚ್ಚಾಗಿರುವ ರಾಜ್ಯಗಳಿಗೆ ಪ್ರಮುಖವಾಗಿ ಐದು ಸಲಹೆಗಳನ್ನು ಆರೋಗ್ಯ ಸಚಿವಾಲಯ ನೀಡಿದೆ. ಈ ಪೈಕಿ, ಒಟ್ಟಾರೆ RT-PCR ಮೂಲಕ ಕೋವಿಡ್-19 ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು. RT-PCR ಪರೀಕ್ಷೆ ವೇಳೆ ನೆಗೆಟಿವ್ ವರದಿ ಬರುವ ಸೋಂಕಿತರ ಬಗ್ಗೆ ನಿಗಾವಹಿಸುವುದು, ಪ್ರಮುಖ ರಾಜ್ಯಗಳಲ್ಲಿ ಗುರುತಿಸಲಾಗುವ ಕಂಟೈನ್ಮೆಂಟ್ ಜೋನ್ಗಳ ಬಗ್ಗೆ ನಿಗಾವಹಿಸುವುದು, ಪ್ರತಿ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಆ ಬಗ್ಗೆ ಕೂಡ ನಿಗಾವಹಿಸುವಂತೆ ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ.