ದೆಹಲಿ, ಮಾ. 29: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 68,020 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 2020ರ ಅಕ್ಟೋಬರ್ ತಿಂಗಳ ನಂತರ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೇ 29 ಸೋಂಕಿತರು ಮೃತಪಟ್ಟಿದ್ದಾರೆ.
ದೇಶದಲ್ಲಿ ಒಟ್ಟ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 5,21,808ಕ್ಕೆ ತಲುಪಿದೆ. ದೇಶಕ್ಕೆ ಕೊರೊನಾ ದಾಳಿಯ ನಂತರ ಜನವರಿ 2020ರಿಂದ ಈವರೆಗೆ 1.2 ಕೋಟಿ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಒಟ್ಟು 1,61,843 ಜನರು ಮೃತಪಟ್ಟಿದ್ದಾರೆ. ಸದ್ಯ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಏರುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈಗಾಗಲೇ ಲಾಕ್ಡೌನ್ ವಿಧಿಸುವ ಸಂಭಾವ್ಯತೆಗಳ ಕುರಿತು ಸುಳಿವು ನೀಡಿದ್ದಾರೆ.
ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೋಳಿ ಹಬ್ಬದ ಆಚರಣೆ ಬಹು ಜೋರಾಗಿದ್ದು ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮುಂಬೈನಲ್ಲಿ ಅಧಿಕೃತವಾಗಿಯೇ ಹೋಳಿ ಆಚರಣೆಗೆ ನಿಷೇಧ ಹೇರಲಾಗಿದ್ದು, ಇನ್ನಿತರ ಪ್ರಮುಖ ನಗರಗಳಾದ ದೆಹಲಿ, ಇಂದೋರ್, ಭೂಪಾಲ್ಗಳಲ್ಲಿ ಸಾರ್ವಜನಿಕವಾಗಿ ಹಬ್ಬಗಳ ಆಚರಣೆ ಮಾಡದಂತೆ ಆಯಾ ರಾಜ್ಯಗಳ ಆಡಳಿತಗಳು ಮನವಿ ಮಾಡಿವೆ. ಅಲ್ಲದೇ ಜಾರ್ಖಂಡ್, ರಾಜಸ್ಥಾನ, ಗೋವಾ, ತೆಲಂಗಾಣ ಉತ್ತರಾಖಂಡ್, ಬಿಹಾರ್, ರಾಜಸ್ಥಾನ, ಹರ್ಯಾಣ, ಮೇಘಾಲಯ ರಾಜ್ಯಗಳ ಸರ್ಕಾರಗಳು ಸಹ ಹೋಳಿ, ಶಬ್-ಇ-ಬರತ್,ಈಸ್ಟರ್ ಮತ್ತು ರಾಮನವಮಿ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದಂತೆ ಸಾರ್ವಜನಿಕರಲ್ಲಿ ಕೋರಿವೆ.