ದೆಹಲಿ, ಏ. 07: ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಮಂಗಳವಾರ ದೇಶದಲ್ಲಿ 1,15,736 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿರುವ ಒಟ್ಟು ಕೊವಿಡ್ ರೋಗಿಗಳ ಸಂಖ್ಯೆ 28,01,785 ಆಗಿದ್ದು, 8,43,473 ಸಕ್ರಿಯ ಪ್ರಕರಣಗಳಿವೆ. ಮಂಗಳವಾರ 630 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 1,66,177ಕ್ಕೇರಿದೆ. ಮಹಾರಾಷ್ಟ್ರದಲ್ಲಿ 55,000 ಪ್ರಕರಣಗಳು, ಛತ್ತೀಸಗಡದಲ್ಲಿ 9,921 ಪ್ರಕರಣ ಪತ್ತೆಯಾಗಿದೆ. ಕರ್ನಾಟಕ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ 5,000ಕ್ಕಿಂತಲೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಕಳೆದ ಬಾರಿಗಿಂತಲೂ ಈ ಬಾರಿ ಕೊರೊನಾವೈರಸ್ ವೇಗವಾಗಿ ಹರಡುತ್ತಿದೆ. ಮುಂದಿನ ನಾಲ್ಕು ವಾರಗಳಲ್ಲಿ ಎರಡನೇ ಅಲೆಯನ್ನು ನಿಯಂತ್ರಿಸುವುದು ಕಷ್ಟವಾಗಲಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಭಾರತದ ಕೊವಿಡ್-19 ಕಾರ್ಯಪಡೆಯ ನೇತೃತ್ವ ವಹಿಸಿರುವ ಡಾ.ವಿ.ಕೆ.ಪೌಲ್ ಕೊವಿಡ್ ನಿಯಂತ್ರಣಕ್ಕೆ ಜನರು ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳು ಹೆಚ್ಚು ಮಹತ್ವ ವಹಿಸಲಿದೆ ಎಂದು ಹೇಳಿದ್ದಾರೆ.
ದೆಹಲಿ, ಚಂಡೀಗಢ್ ನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಹೇರಲಾಗಿದೆ. ಕೊವಿಡ್ ನಿಯಂತ್ರಣಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರ ನಿರ್ಬಂಧಗಳನ್ನು ಹೇರಿದ್ದು ಮದುವೆ ಸಮಾರಂಭಗಳಲ್ಲಿ ಮನೆಯೊಳಗಡೆ ನಡೆಯುವುದಾದರೆ 50 ಮಂದಿ ಮತ್ತು ಹೊರಗಡೆ ನಡೆಯುವುದಾದರೆ 200 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಎಂದು ಹೇಳಿದೆ. ಗುಜರಾತ್ ಹೈಕೋರ್ಟ್ ಆವರಣವು ಏಪ್ರಿಲ್ 10-14ರವರೆಗೆ ಬಂದ್ ಆಗಲಿದ್ದು ಏಪ್ರಿಲ್ 12ಕ್ಕೆ ಇಲ್ಲಿ ಸ್ಯಾನಿಟೈಸೇಷನ್ ನಡೆಯಲಿದೆ.