ಅಮೇರಿಕಾದ ಮಾನವ ಹಕ್ಕುಗಳ ಪರಿಸ್ಥಿತಿ ಮತ್ತು ಮಾನವ ಹಕ್ಕುಗಳ ಬಗೆಗೆ ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಭಾರತವೂ ಕಣ್ಣಿಟ್ಟಿದೆ ಎಂದು ಹೇಳುವ ಮೂಲಕ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅಮೇರಿಕಾಕ್ಕೆ ಅದರದೇ ನೆಲದಲ್ಲಿ ನಿಂತು ಭರ್ಜರಿ ಟಾಂಗ್ ನೀಡಿದ್ದಾರೆ.

ಭಾರತದ ಆಂತರಿಕ ವಿಚಾರಗಳಲ್ಲಿ ಬೇರೆ ದೇಶಗಳು ಮೂಗು ತೂರಿಸುವುದನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಭಾರತ ಅಮೇರಿಕಾಕ್ಕೆ ರವಾನಿಸಿದೆ. ಈ ಹಿಂದೆ ಅಮೇರಿಕಾದ ಪ್ರತಿನಿಧಿಗಳು ಭಾರತದ ಆಂತರಿಕ ವಿಚಾರಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರು, ಎಚ್ಚರಿಕೆಗಳನ್ನು ನೀಡುತ್ತಿದ್ದರು. ಇದೇ ಮೊದಲ ಬಾರಿಗೆ ಭಾರತ ನೇರವಾಗಿ ಅಮೇರಿಕಾಕ್ಕೆ ಎಚ್ಚರಿಕೆ ನೀಡಿದ್ದು, ನಮ್ಮ ಆಂತರಿಕ ವಿಷಯಗಳ ಬಗ್ಗೆ ನೀವು ಮಾತನಾಡಿದರೆ, ನಾವು ಕೂಡಾ ನಿಮ್ಮ ವಿಷಯಗಳ ಬಗ್ಗೆ ಮಾತನಾಡುತ್ತೇವೆ ಎಂಬ ಬಹಿರಂಗ ಎಚ್ಚರಿಕೆ ನೀಡಿದೆ.
ಇನ್ನು ಅಮೇರಿಕಾ ಮತ್ತು ಭಾರತದ ನಡುವೆ 2+2 ಪ್ರತಿನಿಧಿಗಳ ಸಭೆ ಇತ್ತೀಚೆಗೆ ಅಮೇರಿಕಾದಲ್ಲಿ ನಡೆಯಿತು. ಸಭೆಯ ಬಳಿಕ ಮಾತನಾಡಿದ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್, ಭಾರತದಲ್ಲಿ ಅಲ್ಪಸಂಖ್ಯಾತರ ಬಗೆಗೆ ತಾರತಮ್ಯ ಮತ್ತು ಕೆಲವು ರಾಜ್ಯಗಳಲ್ಲಿ ಪೋಲಿಸ್ ಮತ್ತು ಜೈಲುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಬೆಳವಣಿಗೆಗಳ ಮೇಲೆ ಅಮೇರಿಕಾ ನಿಗಾವಹಿಸಿದೆ ಎಂದು ಹೇಳಿದ್ದರು. ಬ್ಲಿಂಕನ್ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅಮೇರಿಕಾಕ್ಕೆ ಚಾಟಿ ಬೀಸಿದ್ದಾರೆ.

ಅಮೇರಿಕಾದ ಮಾದ್ಯಮಗಳೊಂದಿಗೆ ಮಾತನಾಡಿದ ಜೈಶಂಕರ್, ಭಾರತ ಮತ್ತು ಅಮೇರಿಕಾದ ಸಚಿವರ ಮಟ್ಟದಲ್ಲಿ ನಡೆದ ಮಾತುಕತೆಯಲ್ಲಿ ಮಾನವ ಹಕ್ಕುಗಳ ಬಗೆಗೆ ಯಾವುದೇ ಮಾತುಕತೆ ನಡೆದಿಲ್ಲ. ಈ ಸಭೆಯಲ್ಲಿ ಮುಖ್ಯವಾಗಿ ಮಿಲಿಟರಿ ಮತ್ತು ರಾಜಕೀಯ ವಿದ್ಯಮಾನಗಳ ಬಗೆಗೆ ಚರ್ಚೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಅಮೇರಿಕಾಕ್ಕೆ ಭರ್ಜರಿ ತಿರುಗೇಟು ನೀಡಿದೆ. ತನ್ನ ಹಿತಾಸಕ್ತಿಗೆ ಅನುಗುಣವಾಗಿ ಭಾರತ ನಿರ್ಣಯ ತೆಗೆದುಕೊಳ್ಳಲಿದೆ. ಭಾರತದ ಆಂತರಿಕ ವಿಚಾರಗಳ ಬಗೆಗೆ ಬೇರೆಯವರು ಮಾತನಾಡುವುದನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದೆ.