ವಾಷಿಂಗ್ಟನ್, ಜು. 31: ಭಾರತ-ಅಮೆರಿಕನ್ ವಕೀಲ ರಶದ್ ಹುಸೇನ್ ಅವರನ್ನು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಅಮೆರಿಕ ನೇಮಕ ಮಾಡಿದೆ. ಶ್ವೇತಭವನದ ಪ್ರಕಾರ, ಹುಸೇನ್, ಈ ಪ್ರಮುಖ ಸ್ಥಾನಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ವ್ಯಕ್ತಿಯಾಗಿದ್ದಾರೆ.
41 ವರ್ಷದ ಹುಸೇನ್ ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಸಹಭಾಗಿತ್ವ ಮತ್ತು ಜಾಗತಿಕ ಪಾಲ್ಗೊಳ್ಳುವಿಕೆ ವಿಭಾಗದ ನಿರ್ದೇಶಕರಾಗಿದ್ದಾರೆ.
ಅವರು ಈ ಹಿಂದೆ, ನ್ಯಾಯಾಂಗ ಇಲಾಖೆಯ ರಾಷ್ಟ್ರೀಯ ಭದ್ರತಾ ವಿಭಾಗದಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಒಬಾಮಾ ಆಡಳಿತದ ಅವಧಿಯಲ್ಲಿ, ಅವರು ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಅಮೆರಿಕದ ವಿಶೇಷ ರಾಯಭಾರಿಯಾಗಿ ಮತ್ತು ಕಾರ್ಯತಂತ್ರದ ಭಯೋತ್ಪಾದನಾ ನಿಗ್ರಹ ಸಂವಹನಕ್ಕಾಗಿ ಅಮೆರಿಕದ ವಿಶೇಷ ರಾಯಭಾರಿಯಾಗಿ ಹಾಗೂ ವೈಟ್ ಹೌಸ್ ಕೌನ್ಸಿಲ್ನ ಉಪ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.