ನಾಟಿಂಗ್ಹ್ಯಾಮ್, ಜು. 04: ಪ್ರವಾಸಿ ಭಾರತ ಹಾಗೂ ಅತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದ್ದು, ಇದಕ್ಕಾಗಿ ಟ್ರೆಂಟ್ ಬ್ರಿಡ್ಜ್ ಮೈದಾನ ಸಜ್ಜಾಗಿದೆ. ಇದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್(ಡಬ್ಲ್ಯುಟಿಸಿ) 2021-23ರ ಆವೃತ್ತಿಗೆ ಚಾಲನೆ ಸಿಗಲಿದೆ.
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದ್ದ ಭಾರತ ಸುಧೀರ್ಘ ವಿರಾಮದ ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಸಾಕಷ್ಟು ಕಸರತ್ತು ನಡೆಸಿದ್ದು, ಗೆಲವಿನ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ.
ಆದರೆ ಸರಣಿ ಆರಂಭಕ್ಕೂ ಮೊದಲೇ ಭಾರತಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ಭಾರತಕ್ಕೆ ಹನ್ನೊಂದರ ಬಳಗದ ಆಯ್ಕೆಯೇ ತಲೆ ನೋವಾಗಿದೆ. ಪ್ರಮುಖವಾಗಿ ಆರಂಭಿಕರಾದ ಶುಭ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬ ಚಿಂತೆ ಭಾರತ ತಂಡಕ್ಕೆ ಹೆಚ್ಚಾಗಿ ಕಾಡುತ್ತಿದೆ. ಜೊತೆಗೆ ಬೌಲಿಂಗ್ ವಿಭಾಗದಲ್ಲೂ ಅಂತಿಮವಾಗಿ ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲವೂ ಭಾರತವನ್ನು ಕಾಡುತ್ತಿದೆ.
ಆದರೆ, 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಬಹುತೇಕ ಆಟಗಾರರು ಅಲ್ಲಿನ ವಾತಾವರಣವನ್ನು ಚೆನ್ನಾಗಿ ಅರಿತಿರುವುದರಿಂದ ಅತಿಥೇಯ ಇಂಗ್ಲೆಂಡ್ ತಂಡಕ್ಕೆ ಭಾರತೀಯ ಆಟಗಾರರು ಕಠಿಣ ಸವಾಲು ನೀಡುವ ನಿರೀಕ್ಷೆ ಹೆಚ್ಚಾಗಿದೆ. ಈ ಹಿಂದೆ 2018ರಲ್ಲಿ ಇಂಗ್ಲೆಂಡ್ ವಿರುದ್ಧ 4-1ರ ಅಂತರದಿಂದ ಟೆಸ್ಟ್ ಸರಣಿ ಸೋತಿದ್ದ ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಪಂದ್ಯದ ಸಮಯ: ಮಧ್ಯಾಹ್ನ 3:30
ನೇರ ಪ್ರಸಾರ : ಸೋನಿ ನೆಟ್ ವರ್ಕ್