New Delhi: 2023ರ ಅ. 31ರ ನಂತರವೂ ಭಾರತದಿಂದ ಸಕ್ಕರೆ ರಫ್ತು ನಿಷೇಧ ಮುಂದುವರಿಯಲಿದ್ದು, ಸಕ್ಕರೆ ದರ ಏರಿಕೆ ತಡೆಗೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಈ ವರ್ಷ ಕಬ್ಬು ಉತ್ಪಾದನೆ ಇಳಿಕೆಯಾಗಿರುವ ಕಾರಣ ಹಬ್ಬ ಹರಿದಿನಗಳಲ್ಲಿ ಸಕ್ಕರೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಇದರಲ್ಲಿ ಕಚ್ಚಾ ಸಕ್ಕರೆ, ಸಂಸ್ಕರಿಸಿದ ಸಕ್ಕರೆ, ಬಿಳಿ ಸಕ್ಕರೆ ಮತ್ತು ಸಾವಯವ ಸಕ್ಕರೆಯೂ ಸೇರಿವೆ. ಹಾಗಾಗಿ ಸಕ್ಕರೆ ರಫ್ತು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಐರೋಪ್ಯ ಒಕ್ಕೂಟ ಮತ್ತು ಅಮೆರಿಕವು (America) ಈ ನಿಷೇಧದ ಅಡಿಯಲ್ಲಿ ಬರುವುದಿಲ್ಲ ಹಾಗಾಗಿ ಭಾರತದ ಸಕ್ಕರೆ ರಫ್ತು ನಿಷೇಧಕ್ಕೆ ಕೆಲವು ವಿನಾಯಿತಿಗಳೂ ಇವೆ. ಇನ್ನು ಈ ದೇಶಗಳಿಗೆ ಸಕ್ಕರೆ ರಫ್ತು ಮುಂದುವರಿಯಲಿದೆ ಎಂದು ಡಿಜಿಎಫ್ಟಿ (DGFT) ಅಧಿಸೂಚನೆಯಲ್ಲಿ ಹೇಳಲಾಗಿದೆ. ಈ ರಾಷ್ಟ್ರಗಳಿಗೆ ಸಿಎಕ್ಸ್ಎಲ್ (CXL) ಮತ್ತು ಟಿಆರ್ಕ್ಯೂ ಕೋಟಾದ ಅಡಿಯಲ್ಲಿ ರಫ್ತು ಮಾಡಲಾಗುತ್ತಿದೆ.
ಈ ದೇಶಗಳಿಗೆ ಕಡಿಮೆ ಅಥವಾ ಯಾವುದೇ ರಫ್ತು ಸುಂಕ ಇಲ್ಲದೇ ಸಕ್ಕರೆ ರಫ್ತು ಮಾಡಲಾಗುತ್ತಿದ್ದು,ಇದನ್ನು ಸಿಎಕ್ಸ್ಎಲ್ ಮತ್ತು ಟಿಆರ್ಕ್ಯೂ (TRQ) ಕೋಟಾ ಎನ್ನುತ್ತಾರೆ. ಇತ್ತೀಚಿಗೆ ಸಕ್ಕರೆ ಬೆಲೆಯಲ್ಲಿ ಏರಿಕೆಯಾಗಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಿದೆ. ಅಕ್ಟೋಬರ್ (October) 12ರೊಳಗೆ ಸಕ್ಕರೆ ಉತ್ಪಾದನೆ, ರವಾನೆ, ಡೀಲರ್ (Dealer), ಚಿಲ್ಲರೆ ವ್ಯಾಪಾರ ಮತ್ತು ಮಾರಾಟದ ಸಂಪೂರ್ಣ ಡೇಟಾ ನೀಡುವಂತೆ ಸಕ್ಕರೆ ಗಿರಣಿಗಳು ಮತ್ತು ಈ ಸಂಬಂಧಿ ಕಂಪನಿಗಳಿಗೆ ಸರಕಾರವು ಆದೇಶಿಸಿದೆ.
ಅಲ್ಲದೆ ಮಾಹಿತಿ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಲಾಗಿದೆ.ಸರ್ಕಾರವು, ನವೆಂಬರ್ 10 ರೊಳಗೆ ಎನ್ಎಸ್ಡಬ್ಲ್ಯೂಎಸ್ ಪೋರ್ಟಲ್ನಲ್ಲಿ (NSWS Portal) ನೋಂದಾಯಿಸಿಕೊಳ್ಳುವಂತೆ ಸಕ್ಕರೆ ಕಾರ್ಖಾನೆಗಳನ್ನು ಕೇಳಿದೆ. ಕೇಂದ್ರ ಸರ್ಕಾರವು ಅಕ್ಕಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಕುಚಲಕ್ಕಿ ರಫ್ತು ತಗ್ಗಿಸಲು ಶೇ. 20ರ ಸುಂಕವನ್ನು 2024ರವರೆಗೆ ವಿಸ್ತರಣೆ ಮಾಡಿತ್ತು.
ಇತ್ತೀಚಿನ, ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸಕ್ಕರೆ ಬೆಲೆಗಳು ಗರಿಷ್ಠ ಮಟ್ಟ ತಲುಪಿದ್ದು, ಇದು ಸುಮಾರು 13 ವರ್ಷಗಳಲ್ಲೇ ಗರಿಷ್ಠ ದರವಾಗಿದೆ. ಭಾರತ ಮತ್ತು ಥಾಯ್ಲೆಂಡ್ನಲ್ಲಿ (Thailand) ಎಲ್-ನಿನೊ ಪರಿಣಾಮದಿಂದಾಗಿ ಕಬ್ಬಿನ ಬೆಳೆಗೆ ಹಾನಿಯಾಗಿದೆ. ಇದರ ಪರಿಣಾಮ ಸಕ್ಕರೆಯ ಬೆಲೆಯು ಏರಿಕೆಯಾಗುತ್ತಿದೆ.
ಭವ್ಯಶ್ರೀ ಆರ್.ಜೆ