ವಾಷಿಂಗ್ಟನ್, ಮೇ. 12: ವಿಶ್ವದ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಅತಿಹೆಚ್ಚು ಕಂಡುಬರುತ್ತಿದ್ದು, ಈ ಮಹಾಮಾರಿ ವೈರಸ್ ನಿಯಂತ್ರಿಸಲು ಭಾರತ ಹರಸಾಹಸ ಪಡುತ್ತಿದೆ. ಅದರ ಜೊತೆಗೆ ವಿಶ್ವದ ವಿವಿಧ ದೇಶಗಳೂ ಸಹ ಭಾರತದ ನೆರವಿಗೆ ನಿಂತಿವೆ.
ಸದ್ಯ ಕೊರೊನಾ ವೈರಸ್ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಭಾರತಕ್ಕೆ ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆ 15 ಮಿಲಿಯನ್(110 ಕೋಟಿ) ಹಣವನ್ನು ನೀಡುವ ಮೂಲಕ ನೆರವಿನ ಹಸ್ತ ಚಾಚಿದೆ.
ಈ ಕುರಿತು ಟ್ವೀಟ್ ಮಾಡಿರುವ ಟ್ವಿಟ್ಟರ್ ಸಂಸ್ಥೆಯ ಸಿಇಒ ಜಾಕ್ ಪ್ಯಾಟ್ರಿಕ್ ಡಾರ್ಸಿ, ಭಾರತಕ್ಕೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಸರ್ಕಾರೇತರ ಸಂಸ್ಥೆ(ಎನ್ಜಿಒ)ಗಳ ಮೂಲಕ 15 ಮಿಲಿಯನ್ (110 ಕೋಟಿ) ಹಣ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಎನ್ಜಿಒಗಳಾದ ಯೈಡ್ ಇಂಡಿಯಾ ಮತ್ತು ಸೇವಾ ಇಂಟರ್ ನ್ಯಾಷನಲ್ ಅಮೆರಿಕ ಸಂಸ್ಥೆಯೊಂದಿಗೆ ಕೈಜೋಡಿಸಿ 110 ಕೋಟಿ ರೂಪಾಯಿ ಹಣವನ್ನು ನೀಡಲು ಮುಂದೆ ಬಂದಿದ್ದು, ಸೇವಾ ಇಂಟರ್ ನ್ಯಾಷನಲ್ ಎನ್ಜಿಒ ಈಗಾಗಲೇ ಆಕ್ಸಿಜನ್ ಮತ್ತು ವೆಂಟಿಲೇಟರ್ ಗಳನ್ನು ಭಾರತಕ್ಕೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಇದೇ ವೇಳೆ ಭಾರತದಲ್ಲಿನ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸಲು ಅಮೆರಿಕದ ನೆರವು ಮುಂದುವರೆಯಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಭಾರತಕ್ಕೆ ಅಮೆರಿಕ ಸರ್ಕಾರ 100 ದಶಲಕ್ಷ ಡಾಲರ್ ಮೊತ್ತದ ನೆರವು ನೀಡಿದೆ, ಅಮೆರಿಕದ ಖಾಸಗಿ ವಲಗಳಿಂದ 400 ದಶಲಕ್ಷ ಡಾಲರ್ಗಳಷ್ಟು ನೆರವು ನೀಡಲಾಗಿದೆ.
ಹಾಗೆಯೇ ಭಾರತದ ಅಧಿಕಾರಿಗಳು ಮತ್ತು ಆರೋಗ್ಯ ಪರಿಣಿತರರೊಂದಿಗೆ ಕೊರೊನಾ ಬಿಕ್ಕಟ್ಟು ನಿಭಾಯಿಸಲು ಯಾವ ರೀತಿ ನೆರವು ನೀಡಬಹುದಾಗಿದೆ ಎಂಬ ಬಗ್ಗೆ ನಿಕಟ ಸಂಪರ್ಕ ಸಾಧಿಸಲಾಗಿದೆ ಎಂದು ನೆಡ್ ಪ್ರೈಸ್ ತಿಳಿಸಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 4205 ಸೋಂಕಿತರು ಮೃತಪಟ್ಟಿದ್ದಾರೆ. 3,55,338 ಸೋಂಕಿತರು ಚೇತರಿಸಿಕೊಂಡಿದ್ದಾರೆ. 37,04,099 ಸಕ್ರಿಯ ಸೋಂಕಿತ ಪ್ರಕರಣಗಳಿವೆ.