ಹೌದು, ಏಪ್ರಿಲ್(April)ಒಂದರಿಂದ ದುಬಾರಿಯಾಗಿದೆ ದುನಿಯಾ. ನಾವೆಲ್ಲಾ ಹಲಾಲ್ ಕಟ್, ಜಟ್ಕಾ ಕಟ್ ಅಂತ ಜುಟ್ಟು ಜುಟ್ಟು ಹಿಡ್ಕೊಂಡು ಹೊಡಿದಾಡುತ್ತಿದ್ದೇವೆ.
ಆದ್ರೆ ಕೇಂದ್ರ ಸರ್ಕಾರ(Central Government) ನಮ್ಮ ಜೇಬಿಗೇ ತೂತು ಹಾಕಿರೋದು ಯಾರಿಗೂ ಗೊತ್ತೇ ಆಗ್ತಿಲ್ಲ.

ಏಪ್ರಿಲ್ ಒಂದರಿಂದ ಹೊಸ ಆರ್ಥಿಕ ವರ್ಷ ಆರಂಭ ಆಗಿದೆ. ಹೀಗಾಗಿ ಹಲವು ಆರ್ಥಿಕ ಬದಲಾವಣೆಗಳಾಗಿವೆ. ಹಾಗಾದ್ರೆ ಆ ಬದಲಾವಣೆಗಳು ಯಾವುವು? ಯಾವುದರ ಬೆಲೆ ಜಾಸ್ತಿಯಾಗಲಿದೆ? ಯಾವುದಕ್ಕೆ ಎಷ್ಟು ತೆರಿಗೆ ಹೆಚ್ಚಾಗಿದೆ ಒಮ್ಮೆ ನೋಡ್ಕೊಂಡು ಬರೋಣ.
ಔಷಧಿ ಬೆಲೆ ದುಬಾರಿ : ಏಪ್ರಿಲ್ ಒಂದರಿಂದ 800 ಔಷಧಿಗಳ ಬೆಲೆ ಹೆಚ್ಚಾಗಿದೆ. ನೋವು ನಿವಾರಕಗಳು, ಆಂಟಿ ವೈರಸ್ಗಳು ಸೇರಿದಂತೆ ಅನೇಕ ಔಷಧಿಗಳ ಬೆಲೆ ಶೇಕಡಾ 10ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ಯಾರಸಿಟಮಲ್, ಆಂಟಿ ಬಯೋಟಿಕ್, ಅಝಿತ್ರೋಮೈಸಿನ್, ಬ್ಯಾಕ್ಟೀರಿಯಲ್ ಸೋಂಕು ನಿವಾರಕಗಳು, ಆಂಟಿ ಅನೀಮಿಯಾ, ವಿಟಮಿನ್ಸ್ ಮತ್ತು ಮಿನರಲ್ಸ್ ಹೀಗೆ ಅತ್ಯಂತ ಪ್ರಮುಖ ಔಷಧಿಗಳ ಬೆಲೆ ಜಾಸ್ತಿಯಾಗಿರೋದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಹೊಸ ಮನೆಕೊಳ್ಳುವವರಿಗೆ ಶಾಕ್ : ಇಷ್ಟು ದಿನ ಕೇಂದ್ರ ಸರ್ಕಾರ ಹೊಸ ಮನೆ ಖರೀದಿಸುವವರಿಗೆ ಸೆಕ್ಷನ್ 80ಇಇಎ ಅಡಿ ತೆರಿಗೆ ವಿನಾಯ್ತಿ ನೀಡುತ್ತಿತ್ತು. ಆದ್ರೆ ಏಪ್ರಿಲ್ ಒಂದರಿಂದ ಅದನ್ನು ರದ್ದು ಮಾಡಲಾಗಿದೆ. ಇದು ಹೊಸ ಮನೆ ಖರೀದಿದಾರರಿಗೆ ದೊಡ್ಡ ಶಾಕ್ ಕೊಟ್ಟಿದೆ.
LPG ಸಿಲಿಂಡರ್ ಬೆಲೆ ಏರಿಕೆ : ಈಗಾಗ್ಲೇ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 2200-2400ಕ್ಕೇರಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯೂ ಸಾವಿರದ ಗಡಿ ದಾಟುತ್ತಿದೆ. ಇನ್ನು ಏಪ್ರಿಲ್ ತಿಂಗಳಲ್ಲಿ ಇದರ ಬೆಲೆ ಇನ್ನಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ಯಾಕಂದ್ರೆ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಡೋಸ್ ಲೆಕ್ಕದಲ್ಲಿ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಉಳಿದ ಇಂಧನಗಳ ಬೆಲೆಯೂ ಏರಿಕೆ ಆಗೋದ್ರಲ್ಲಿ ಸಂಶಯವೇ ಇಲ್ಲ.

ಕ್ರಿಪ್ಟೋ ಮೇಲೆ ಶೇ 30 ತೆರಿಗೆ : ಇನ್ಮುಂದೆ ಕ್ರಿಪ್ಟೋ ಅಥವಾ ಡಿಜಿಟಲ್ ಕರೆನ್ಸಿ ಮೇಲೆ ಸರ್ಕಾರ ತೆರಿಗೆ ವಿಧಿಸಲಿದೆ. ಕ್ರಿಪ್ಟೋ ಕರೆನ್ಸಿ ವರ್ಗಾವಣೆ ವೇಳೆ ಗಳಿಸಿದ ಆದಾಯದ ಮೇಲೆ ಶೇ. 30ರಷ್ಟನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಕ್ರಿಪ್ಟೋ ವಹಿವಾಟಿಗೆ ಶೇ. 1ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಕ್ರಿಪ್ಟೋ ಆಸ್ತಿಯನ್ನು ಉಡುಗೊರೆಯಾಗಿ ಸ್ವೀಕರಿಸಿದ್ರೆ , ಸ್ವೀಕರಿಸುವ ವ್ಯಕ್ತಿ ಅವುಗಳ ಮೇಲಿನ ತೆರಿಗೆ ಪಾವತಿಸಬೇಕು.
ಪಿಎಫ್ ಮೇಲೆ ತೆರಿಗೆ ಏರಿಕೆ : ಏಪ್ರಿಲ್ನಿಂದ ಹೊಸ ಆದಾಯ ತೆರಿಗೆ ಜಾರಿಯಾಗಿದೆ. ಪರಿಣಾಮವಾಗಿ ಅಸ್ತಿತ್ವದಲ್ಲಿರುವ ಪಿಎಫ್ ಖಾತೆಗಳ ಮೇಲೆಯೂ ತೆರಿಗೆ ವಿಧಿಸಲಾಗುತ್ತದೆ. ಪಿಎಫ್ ಖಾತೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು, ಅವುಗಳೆಂದರೆ ಉದ್ಯೋಗಿಗಳು ಹಾಗೂ ಉದ್ಯೋಗದಾತರ ಕೊಡುಗೆ ಎರಡೂ ಸೇರಿ ವಾರ್ಷಿಕ 2.50 ಲಕ್ಷ ರೂ ಮೀರುವ ಪಿಎಫ್ ಖಾತೆಗಳಿಗೆ ಇನ್ಮುಂದೆ ಸರ್ಕಾರ ತೆರಿಗೆ ವಿಧಿಸಲಿದೆ.

ವಾಹನ ವಿಮೆ ದುಬಾರಿ : ಇನ್ಮುಂದೆ ಹೊಸ ಬೈಕ್ ಅಥವಾ ಕಾರು ಖರೀದಿ ದುಬಾರಿಯಾಗಲಿದೆ. ಥರ್ಡ್ ಪಾರ್ಟಿ ಮೋಟಾರ್ ವಿಮೆಯನ್ನು ಹೆಚ್ಚಿಸುವುದಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಘೋಷಿಸಿದೆ. ಹಾಗಾಗಿ ಬೈಕು , ಕಾರು ಖರೀದಿಸುವವರು ಶೇಕಡಾ 17 ರಿಂದ 21ರಷ್ಟು ಹೆಚ್ಚುವರಿ ಹಣ ನೀಡಬೇಕಾಗುತ್ತದೆ.
ಫಿಕ್ಸೆಡ್ ಡಿಪಾಸಿಟ್ ರದ್ದು : ಕೊರೋನಾ ಸಮಯದಲ್ಲಿ ಕೆಲ ಬ್ಯಾಂಕ್ಗಳು ಹಿರಿಯ ನಾಗರೀಕರಿಗೆ ವಿಶೇಷ ಎಫ್ಡಿ ಯೋಜನೆಯನ್ನು ಜಾರಿಗೊಳಿಸಿದ್ದವು. ಆದ್ರೆ ಈ ವಿಶೇಷ ಎಫ್.ಡಿಗಳು ಈ ತಿಂಗಳಿನಿಂದ ರದ್ದುಗೊಳಿಸಲು ಕೆಲ ಬ್ಯಾಂಕುಗಳು ನಿರ್ಧರಿಸಿವೆ.
