ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 238 ರನ್ಗಳಿಸಲಷ್ಟೇ ಶಕ್ತವಾಯಿತು. 239ರ ಸುಲಭ ಗುರಿ ಬೆನ್ನತ್ತಿದ ಪ್ರವಾಸಿಗರು, ಭಾರತದ ಪ್ರಬಲ ಬೌಲಿಂಗ್ ದಾಳಿಗೆ, ಅದ್ರಲ್ಲೂ ಕನ್ನಡಿಗ ಪ್ರಸಿದ್ಧ ಕೃಷ್ಣ ದಾಳಿಗೆ ನಲುಗಿದ ವಿಂಡೀಸ್ 193 ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ 3 ಸರಣಿಯ ಪಂದ್ಯದಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾಯಿತು.

ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 8 ರನ್, ರಿಷಭ್ ಪಂತ್ 18 ರನ್ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ 18 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಹೀಗೆ 12 ಓವರ್ಗಳಿಗೆ ತಂಡದ ಮೂವರು ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಕೇವಲ 43 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಜತೆಯಾದ ಕೆ.ಎಲ್. ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 91 ರನ್ಗಳ ಜತೆಯಾಟವನ್ನು ಆಡುವುದರ ಮೂಲಕ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ಕೆ.ಎಲ್ ರಾಹುಲ್ 49 ರನ್ ಮತ್ತು ಸೂರ್ಯಕುಮಾರ್ ಯಾದವ್ 64 ರನ್ ಕಲೆಹಾಕಿ ತಂಡಕ್ಕೆ ಆಪತ್ಬಾಂಧವರಾದರು.
ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 24, ದೀಪಕ್ ಹೂಡಾ 29, ಶಾರ್ದೂಲ್ ಠಾಕೂರ್ 8, ಮೊಹಮ್ಮದ್ ಸಿರಾಜ್ 3, ಯುಜುವೇಂದ್ರ ಚಾಹಲ್ ಅಜೇಯ 11 ಹಾಗೂ ಪ್ರಸಿದ್ಧ್ ಕೃಷ್ಣ ಔಟ್ ಆಗದೆ 0 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿದ್ದು ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 238 ರನ್ಗಳ ಗುರಿಯನ್ನು ನೀಡಿತು. ಟೀಮ್ ಇಂಡಿಯಾ ನೀಡಿದ ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡದ ಪರ ಶಾಮ್ರಾ ಬ್ರೂಕ್ಸ್, ಅಂತಿಮ ಹಂತದಲ್ಲಿ ಓಡಿಯನ್ ಸ್ಮಿತ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ದೊಡ್ಡ ರನ್ ಬಾರಿಸುವಲ್ಲಿ ಯಶಸ್ವಿಯಾಗಲಿಲ್ಲ.

ಶಾಯ್ ಹೋಪ್ 27, ಬ್ರ್ಯಾಂಡನ್ ಕಿಂಗ್ 18, ಡರೆನ್ ಬ್ರಾವೊ 1, ಶಾಮ್ರಾ ಬ್ರೂಕ್ಸ್ 44, ನಿಕೋಲಸ್ ಪೂರನ್ 9, ಜೇಸನ್ ಹೋಲ್ಡರ್ 2, ಅಖೇಲ್ ಹುಸೇನ್ 34, ಫ್ಯಾಬಿಯನ್ ಅಲೆನ್ 13, ಓಡಿಯನ್ ಸ್ಮಿತ್ 24, ಕೆಮರ್ ರೋಚ್ ೦ ಮತ್ತು ಅಜಾರಿ ಜೋಸೆಫ್ ಅಜೇಯ 7 ರನ್ ಕಲೆ ಹಾಕಿದರು. ಈ ಮೂಲಕ ವೆಸ್ಟ್ ಇಂಡೀಸ್ 46 ಓವರ್ಗಳಲ್ಲಿ 193 ರನ್ಗಳಿಗೆ ಆಲ್ ಔಟ್ ಆಯಿತು. ಬ್ಯಾಟಿಂಗ್ ವಿಭಾಗದಲ್ಲಿ ಕೆ.ಎಲ್. ರಾಹುಲ್ 48 ಎಸೆತಗಳಲ್ಲಿ 49 ರನ್ ಬಾರಿಸಿ ತಂಡಕ್ಕೆ ಆಸರೆಯಾದರೆ, ಬೌಲಿಂಗ್ನಲ್ಲಿ 9 ಓವರ್ ಬೌಲಿಂಗ್ ಮಾಡಿ 3 ಮೇಡನ್ ಓವರ್ ಜತೆಗೆ ಕೇವಲ 12 ರನ್ ನೀಡಿ 4 ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ ವೆಸ್ಟ್ ಇಂಡೀಸ್ ತಂಡದ ಸೋಲಿಗೆ ಕಾರಣವಾಗಿ ಭಾರತದ ಪರ ಮಿಂಚಿದರು.