ಗಡಿಯಲ್ಲಿ ಪದೇ ಪದೇ ಕಿರಿಕ್ ಮಾಡುತ್ತಿರುವ ಚೀನಾಗೆ(China) ಭಾರತ(India) ಮತ್ತೊಂದು ಹೊಡೆತ ನೀಡುತ್ತಿದೆ. ಭದ್ರತೆಯ ಕಾರಣದಿಂದಾಗಿ ಚೀನಾದ ಹಲವು ಆ್ಯಪ್ ಗಳನ್ನು ಬಂದ್ ಮಾಡಲಾಗಿತ್ತು, ಇದೀಗ ಮೊಬೈಲ್ ಫೋನ್ಗಳ ಸರದಿ. ಚೀನೀ ಸ್ಮಾರ್ಟ್‌ಫೋನ್ ಸಂಸ್ಥೆಗಳು ಈಗ ಭಾರತದಲ್ಲಿ ಬಹುಪಾಲು ಸಾಧನಗಳನ್ನು ಮಾರಾಟ ಮಾಡುತ್ತಾರೆ, ಆದರೆ ಅವರ ಮಾರುಕಟ್ಟೆ ಪ್ರಾಬಲ್ಯವು “ಮುಕ್ತ ಮತ್ತು ನ್ಯಾಯಯುತ ಸ್ಪರ್ಧೆಯ ಆಧಾರದ ಮೇಲೆ” ಇರಲಿಲ್ಲ ಎಂದು ಭಾರತದ ತಂತ್ರಜ್ಞಾನ ಸಚಿವರು ಕಳೆದ ವಾರ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗೆ ತಿಳಿಸಿದ್ದರು.

ಇನ್ನು, ಬ್ಲೂಮ್‌ಬರ್ಗ್ ವರದಿಯ ಪ್ರಕಾರ ದೇಶದಲ್ಲಿ 12,000 ರೂ.ಗಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್‌ಫೋನ್(SmartPhone) ಮಾರಾಟವನ್ನು ನಿಷೇಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಭಾರತದಲ್ಲಿ ದೇಶೀಯ ಮೊಬೈಲ್ ಉದ್ಯಮ ಕೊಂಚ ಮಟ್ಟಿಗೆ ಕುಗ್ಗುತ್ತಿದ್ದು, ಇದನ್ನು ಲಾಭದಾಯಕ ದಾರಿಯಲ್ಲಿ ಸಾಗಿಸುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಮುಂದಾಗಿದೆ.
ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾದ ಭಾರತದಲ್ಲಿ, ಇತ್ತೀಚಿಗೆ ಚೀನಾ ಮೂಲದ ಶಿಯೋಮಿ, ಒಪ್ಪೋ, ವಿವೋ, ಪೊಕೊ ಕಂಪನಿ ಫೋನ್‌ಗಳ ಅಬ್ಬರ ಹೆಚ್ಚಾಗಿದೆ. ಹಾಗಾಗಿ, ಚೀನಾ ಫೋನ್‌ಗಳನ್ನು ಬ್ಯಾನ್(Ban) ಮಾಡುವುದರಿಂದ ಸ್ವದೇಶಿ ಬ್ರ್ಯಾಂಡ್‌ಗಳಿಗೆ ವರವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಚೀನೀ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಪ್ರಸ್ತುತ 12,000 ರೂ. ವಿಭಾಗದಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. ಮೈಕ್ರೋಮ್ಯಾಕ್ಸ್, ಲಾವಾ ಮತ್ತು ಕಾರ್ಬನ್ ನಂತಹ ಸ್ವದೇಶಿ ಬ್ರಾಂಡ್‌ಗಳಿಗೆ ಈ ವಿಭಾಗದಲ್ಲಿ ತಮ್ಮ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. 12,000 ರೂ. ($150) ಒಳಗಿನ ಸೆಲ್‌ಫೋನ್‌ಗಳು ದೇಶೀಯವಾಗಿ ಹೆಚ್ಚು ಮಾರಾಟವಾಗಿವೆ.
ಈ ಮಾದರಿಗಳನ್ನು ಸ್ಥಳೀಯ ಸಂಸ್ಥೆಗಳು ಸಹ ಉತ್ಪಾದಿಸುತ್ತವೆ. ಆದರೆ ಶಿಯೋಮಿ, ವಿವೋ, ಒಪ್ಪೋ ಮತ್ತು ರಿಯಲ್‌ಮಿನಂತಹ ಚೀನಾದ ಕಂಪನಿಗಳ ಆಕ್ರಮಣಶೀಲತೆಯಿಂದ, ಲಾವಾ ಮತ್ತು ಮೈಕ್ರೋಮ್ಯಾಕ್ಸ್‌ನಂತಹ ದೇಶೀಯ ಕಂಪನಿಗಳು ಬದುಕಲು ಹೆಣಗಾಡುತ್ತಿವೆ. ಬಿಡಿಭಾಗಗಳು ಸೇರಿದಂತೆ ಫೋನ್‌ಗಳನ್ನು ತಯಾರಿಸಲು ಬೃಹತ್ ಸ್ಥಾವರಗಳನ್ನು ಹೊಂದಿರುವ ಚೀನಾದ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದೆ, ಅನೇಕ ದೇಶೀಯ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿವೆ.

ಈ ನಿಟ್ಟಿನಲ್ಲಿ ದೇಶೀಯ ತಯಾರಕರನ್ನು ರಕ್ಷಿಸುವ ಸಲುವಾಗಿ 12,000 ರೂ. ಗಿಂತ ಕಡಿಮೆ ಬೆಲೆಯ ಚೀನಾ ಕಂಪನಿಗಳ ಫೋನ್‌ಗಳ ಮಾರಾಟದ ಮೇಲೆ ನಿರ್ಬಂಧಗಳನ್ನು ಹೇರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಭಾರತದಿಂದ ಬ್ಯಾನ್ ಮಾಡಿದರೆ, ಚೀನಾದ ಕಂಪನಿಗಳಿಗೆ ಹೊಡೆತ ಬೀಳೋದು ಶತಸಿದ್ಧ ಎನ್ನಲಾಗಿದೆ. ದೇಶೀಯವಾಗಿ ಮಾರಾಟವಾಗುವ ಈ ಫೋನ್‌ಗಳಲ್ಲಿ 80% ಪ್ರತಿಶತ ಚೀನೀ ಕಂಪನಿಗಳಿಗೆ ಸೇರಿವೆ.
ಭಾರತದಲ್ಲಿ 12,000ರೂ. ಒಳಗೆ ಲಭ್ಯವಾಗುವ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳನ್ನು ಬ್ಯಾನ್ ಮಾಡಿದರೆ, ದೇಶಿಯ ಮೊಬೈಲ್ ಬ್ರ್ಯಾಂಡ್‌ಗಳಿಗೆ ಲಾಭವೇ ಸರಿ ಎನ್ನಬಹುದು. ಸಾಮಾನ್ಯವಾಗಿ ಬಹುತೇಕ ಜನರು 10,000 ರಿಂದ 12,000 ಸಾವಿರ ಬೆಲೆಯಲ್ಲಿ ಫೋನ್ ಖರೀದಿಸುತ್ತಾರೆ. ಈ ವರ್ಗದಲ್ಲಿ ಚೀನಾ ಫೋನ್‌ಗಳು ಕಣ್ಮರೆಯಾದರೆ, ಮಾರುಕಟ್ಟೆಯಲ್ಲಿ ದೇಶಿಯ ಮೊಬೈಲ್‌ಗಳು ಕಾಣಸಿಗುತ್ತವೆ. ಜನರು ಸ್ವದೇಶಿ ಕಂಪನಿಗಳ ಮೊಬೈಲ್ ಖರೀದಿ ಮಾಡುವತ್ತ ಮನಸ್ಸು ಮಾಡುವ ಸಾಧ್ಯತೆಗಳಿವೆ.

ಹಾಗೆಯೇ ಸ್ವದೇಶಿ ಮೊಬೈಲ್ ಕಂಪನಿಗಳು ಈ ವರ್ಗದಲ್ಲಿ ಗ್ರಾಹಕರನ್ನು ಸೆಳೆಯಲು ಕೆಲವೊಂದು ಆಕರ್ಷಕ ಫೀಚರ್ಸ್ ಹಾಗೂ ಡಿಸೈನ್ ಅಭಿವೃದ್ಧಿಪಡಿಸುವತ್ತ ಗಮನ ನೀಡಬೇಕಿದೆ. ಜೊತೆಗೆ ಹೆಚ್ಚಿನ ಶ್ರೇಣಿಯಲ್ಲಿ ಫೋನ್‌ಗಳ ಆಯ್ಕೆ ನೀಡುವುದು ಮುಖ್ಯವಾಗಿದೆ. ಇನ್ನೊಂದು ದೃಷ್ಠಿ ಕೋನದಿಂದ ನೋಡುವುದಾದರೆ, ಚೈನೀಸ್ ಮೊಬೈಲ್ ಬ್ಯಾನ್ ನಿರ್ಧಾರದ ನಂತರ ಜನರು 12,000ರೂ.ಗಿಂತ ಅಧಿಕ ಬೆಲೆಯ ಮೊಬೈಲ್‌ಗಳತ್ತ ವಾಲುವ ಸಾಧ್ಯತೆಯೂ ಹೆಚ್ಚಾಗಿದೆ.