ನವದೆಹಲಿ : 12 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಚೀನಾ(China) ಮೂಲದ ಕಂಪನಿಗಳ ಮೊಬೈಲ್ಗಳಿಗೆ(China Mobiles) ನಿಷೇಧ ಹೇರಲು ಕೇಂದ್ರ ಸರ್ಕಾರ(Central Government) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಕಡಿಮೆ ಬೆಲೆಯ ಚೀನಾ ಮೂಲದ ಮೊಬೈಲ್ಗಳು ಕಳಪೆ ಗುಣಮಟ್ಟವನ್ನು ಹೊಂದಿರುವುದನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಹೀಗಾಗಿ ಗುಣಮಟ್ಟದ ಆಧಾರದಲ್ಲಿ 12 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯ ಮೊಬೈಲ್ಫೋನ್ಗಳಿಗೆ ನಿಷೇಧ(Ban) ಹೇರಲು ಚಿಂತನೆ ನಡೆಸಿದೆ.
ಇನ್ನೊಂದೆಡೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಚೀನಾ ಕಂಪನಿಗಳ ಪ್ರಭಾವವನ್ನು ಕಡಿಮೆ ಮಾಡಿ, ದೇಶಿ ಮೊಬೈಲ್ ಉತ್ಪಾದನಾ ಕಂಪನಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ ಹೆಜ್ಜೆಯಾಗಲಿದೆ. ಕಡಿಮೆ ಬೆಲೆಯ ಚೀನಾದ ಮೊಬೈಲ್ಗಳಿಗೆ ನಿಷೇಧ ಹೇರಿದರೆ, ಭಾರತದ ದೇಶಿ ಕಂಪನಿಗಳಿಗೆ ಪ್ರೋತ್ಸಾಹ ಸಿಗಲಿದೆ. ಸದ್ಯ 4ಜಿ ಮೊಬೈಲ್ಗಳ ಉತ್ಪಾದನೆಯಲ್ಲಿ ಚೀನಾ ಮೂಲದ ಕಂಪನಿಗಳು, ದೇಶದ ಮಾರುಕಟ್ಟೆಯಲ್ಲಿ ಶೇಕಡಾ 70 ರಷ್ಟು ಪಾಲನ್ನು ಹೊಂದಿವೆ. ಆದರೆ ಈ ಹಿಂದೆ 2ಜಿ ಮೊಬೈಲ್ ಉತ್ಪಾದನೆಯಲ್ಲಿ ಭಾರತದ ದೇಶಿ ಕಂಪನಿಗಳಾದ ಲಾವಾ, ಮೈಕ್ರೋಮ್ಯಾಕ್ಸ್, ಕಾರ್ಬನ್ನಂತ ಕಂಪನಿಗಳು ಹೆಚ್ಚು ಪಾಲನ್ನು ಹೊಂದಿದ್ದವು.
4ಜಿ ಮೊಬೈಲ್ ಉತ್ಪಾದನೆಯಲ್ಲಿ ಚೀನಾ ಕಂಪನಿಗಳು ಪ್ರಾಬಲ್ಯ ಸಾಧಿಸಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಭಾರತ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಮಾರುಕಟ್ಟೆಯಾಗಿದೆ. ಚೀನಾದ ವಿವೋ, ಕ್ಸಿಯೋಮಿ, ಒಪ್ಪೋ ಕಂಪನಿಗಳು ಸ್ಮಾರ್ಟ್‍ಫೋನ್, ಮೊಬೈಲ್ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿದ ಪರಿಣಾಮ ದೇಶೀಯ ಕಂಪನಿಗಳು ನಷ್ಟವನ್ನು ಅನುಭವಿಸಿ ಮಾರುಕಟ್ಟೆಯಿಂದಲೇ ಹಿಂದೆ ಸರಿದಿವೆ. ಹೀಗಾಗಿ ಸದ್ಯ ಭಾರತದ ಮೊಬೈಲ್ ಉತ್ಪಾದನಾ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳೇ ಹಿಡಿತ ಸಾಧಿಸಿವೆ.