ಹೊಸದಿಲ್ಲಿ, ಜು. 22: ಅತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಈಗಾಗಲೇ ಗಾಯದ ಸಮಸ್ಯೆಗೆ ತುತ್ತಾಗಿರುವ ಭಾರತದ ಆರಂಭಿಕ ಬ್ಯಾಟ್ಸಮನ್ ಶುಭ್ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ಬೆನ್ನಲ್ಲೇ ವಾಷಿಂಗ್ಟನ್ ಸುಂದರ್ ಸಹ ಸರಣಿಯಿಂದ ಹೊರಗುಳಿದಿದ್ದಾರೆ.
ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಈಗಾಗಲೇ ಇಂಗ್ಲೆಂಡ್ಗೆ ತೆರಳಿದ್ದ ವಾಷಿಂಗ್ಟನ್ ಸುಂದರ್, ಕೈ ಬೆರಳಿನ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಇವರಿಗೆ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 4ರಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾಕ್ಕೆ ಗಾಯಾಳುಗಳ ಸಮಸ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ಗಾಯದ ಸಮಸ್ಯೆಗೆ ತುತ್ತಾಗಿರುವ ಆರಂಭಿಕ ಬ್ಯಾಟ್ಸಮನ್ ಶುಭ್ಮನ್ ಗಿಲ್, ಈಗಾಗಲೇ ಭಾರತಕ್ಕೆ ಮರಳಿದಿದ್ದಾರೆ.
ಮತ್ತೊಂದೆಡೆ ತಂಡದ ರಿಸರ್ವ್ ಪೇಸರ್ ಆಗಿ ಇಂಗ್ಲೆಂಡ್ಗೆ ತೆರಳಿರುವ ಯುವ ವೇಗಿ ಆವೇಶ್ ಖಾನ್ ಸಹ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಸದ್ಯ ಆವೇಶ್ ಖಾನ್ ಅವರ ಗಾಯದ ಸಮಸ್ಯೆ ಮೇಲೆ ಬಿಸಿಸಿಐ ವೈದ್ಯಕೀಯ ತಂಡ ನಿಗಾವಹಿಸಿದ್ದು, ಹೀಗಾಗಿ ಆವೇಶ್ ಖಾನ್ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಮುಂದುವರಿಯುವ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.