ಹೈದರಾಬಾದ್ : ತೆಲಂಗಾಣ ಮುಖ್ಯಮಂತ್ರಿ(Telangana Chiefminister) ಕೆ. ಚಂದ್ರಶೇಖರ ರಾವ್(K Chandrashekar Rao) ಅವರು ಕರ್ನಾಟದ 110 ವರ್ಷ ವಯಸ್ಸಿನ ಭಾರತೀಯ ಪರಿಸರವಾದಿ, ಸಾಲುಮರದ ತಿಮ್ಮಕ್ಕ(Salumarada Thimmakka) ಅವರನ್ನು ಮೊನ್ನೆ ನಡೆದ ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಿದ್ದಾರೆ.

ತಿಮ್ಮಕ್ಕ ಅವರು ಪ್ರಗತಿ ಭವನದಲ್ಲಿ ಶ್ರೀ ರಾವ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರನ್ನು ಮುಖ್ಯಮಂತ್ರಿಗಳೇ ಸಭೆಯಲ್ಲಿದ್ದ ಸಚಿವರು ಹಾಗೂ ಸಾರ್ವಜನಿಕ ಪ್ರತಿನಿಧಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಇವರೆಲ್ಲರ ಸಮ್ಮುಖದಲ್ಲಿ ಚಂದ್ರಶೇಖರ್ ರಾವ್ ತಿಮ್ಮಕ್ಕ ಅವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ತೆಲಂಗಾಣ ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ರಾವ್ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ತಿಮ್ಮಕ್ಕ ಹೇಳಿದರು.
ರಾವ್ ಅವರ ನೇತೃತ್ವದಲ್ಲಿ ಕೃಷಿ, ಅರಣ್ಯ ಇತ್ಯಾದಿ ಕ್ಷೇತ್ರಗಳಲ್ಲಿ ತೆಲಂಗಾಣದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇನ್ನಷ್ಟು ಗಿಡಗಳನ್ನು ಬೆಳೆಸುವುದಾಗಿ ತಿಮ್ಮಕ್ಕ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದು, ಪರಿಸರ ಸಂರಕ್ಷಣೆಗಾಗಿ ಅವರ ಹಂಬಲ ಸಮಾವೇಶದಲ್ಲಿದ್ದವರಿಗೆ ಸಾಕಷ್ಟು ಸ್ಪೂರ್ತಿ ತುಂಬಿದೆ.

ತೆಲಂಗಾಣ ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಜೆ ಅವರು ಪದ್ಮಶ್ರೀ ಪುರಸ್ಕೃತರಾದ ತಿಮ್ಮಕ್ಕ ಅವರನ್ನು ಭೇಟಿಯಾಗಿ ಜೂನ್ 28 ರಂದು ಅವರ 111ನೇ ಜನ್ಮದಿನದಂದು ಗ್ರೀನ್ ಫೌಂಡೇಶನ್‌ನಿಂದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮಾರಂಭದ ಮಧ್ಯೆ ತಿಳಿಸಿದರು.