- ಕಳಪೆ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ CDSCO
- ಹಿಮಾಚಲ ಪ್ರದೇಶದಲ್ಲಿ ತಯಾರಾಗ್ತಿವೆ ಅತಿ ಹೆಚ್ಚು ಕಳಪೆ ಔಷಧಿಗಳು
- ಅಂಬ್ರೋಕ್ಸಾಲ್, ನೊಸ್ಕಾಪೈನ್ ಸೇರಿದಂತೆ ಹಲವು ಕೆಮ್ಮಿನ ಔಷಧಿಗಳು ವಿಷಪೂರಿತ
New delhi: ಔಷಧಿಗಳ ಸುರಕ್ಷತೆ ಕುರಿತು ಭಾರತದ ಜನರು ಮತ್ತೊಮ್ಮೆ ಆತಂಕಕ್ಕೆ ಒಳಗಾಗಿದ್ದಾರೆ.(Indian medicines fail quality tests)
ಅದಕ್ಕೆ ಮೂಲ ಕಾರಣವೆಂದರೆ ಇತ್ತೀಚೆಗಷ್ಟೇ ಕೆಮ್ಮಿನ ಸಿರಪ್ (Syrup)_ಕುಡಿದು ಮಕ್ಕಳು ಸಾವಿಗೀಡಾದ ನಂತರದಲ್ಲಿ , ಔಷಧಿಗಳ ಗುಣಮಟ್ಟದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಈ ಹಿನ್ನೆಲೆ, ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ದೇಶದಾದ್ಯಂತ ಮಾರಾಟವಾಗುತ್ತಿರುವ ಔಷಧಿಗಳ ಗುಣಮಟ್ಟವನ್ನು ಪರೀಕ್ಷಿಸಿ ವರದಿ ಬಿಡುಗಡೆ ಮಾಡಿದೆ.

ಆ ವರದಿ ಪ್ರಕಾರ, ಬರೋಬ್ಬರಿ 112 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಇದು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.
ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಕಟವಾದ CDSCO ವರದಿಯ ಪ್ರಕಾರ, ದೇಶದ ವಿವಿಧ ರಾಜ್ಯಗಳಿಂದ ಸಂಗ್ರಹಿಸಿದ 112 ಔಷಧ ಮಾದರಿಗಳು Non-Standard Quality (NSQ)ಎಂದು ಘೋಷಿಸಲಾಗಿದೆ. (Indian medicines fail quality tests)
ಈ ಪೈಕಿ 52 ಔಷಧಿಗಳು ಕೇಂದ್ರ ಲ್ಯಾಬೋರೇಟರಿಯಲ್ಲಿ, ಮತ್ತು 60 ಔಷಧಿಗಳು ರಾಜ್ಯ ಲ್ಯಾಬೋರೇಟರಿಗಳಲ್ಲಿ ಪರೀಕ್ಷೆಯಲ್ಲಿ ಕಳಪೆ ಗುಣಮಟ್ಟದವು ಎಂದು ಪತ್ತೆಯಾಗಿದೆ.
ಕರ್ನಾಟಕದಲ್ಲಿ ಉತ್ಪಾದನೆಯಾದ ಗ್ಲೈಮ್‌ಪ್ರೈಡ್ (Glympride) ಸೇರಿದಂತೆ ಹಲವಾರು ಪ್ರಸಿದ್ಧ ಔಷಧಿಗಳೂ ಈ ಪಟ್ಟಿ ಸೇರಿವೆ.
ಈ ಔಷಧಿಗಳನ್ನು ಬಳಕೆ ಮಾಡುವವರು ಖರೀದಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.CDSCO ವರದಿ ಕೇವಲ ಗುಣಮಟ್ಟದ ಸಮಸ್ಯೆಯನ್ನಷ್ಟೇ ಅಲ್ಲ, ಅಕ್ರಮ ಉತ್ಪಾದನೆ ಪ್ರಕರಣವನ್ನೂ ಬಹಿರಂಗಪಡಿಸಿದೆ.
ಛತ್ತೀಸ್ಗಢ ರಾಜ್ಯದ ಒಂದು ಕಂಪನಿ ಬೇರೆ ಕಂಪನಿಯ ಹೆಸರಿನಲ್ಲಿ ನಕಲಿ ಔಷಧಿಗಳನ್ನು ಅಕ್ರಮವಾಗಿ ತಯಾರಿಸುತ್ತಿದೆ ಎಂಬುದು ಪತ್ತೆಯಾಗಿದೆ.
ಈ ರೀತಿಯ ಕಳಪೆ ಮತ್ತು ನಕಲಿ ಔಷಧಿಗಳು ಸಾರ್ವಜನಿಕ ಆರೋಗ್ಯಕ್ಕೆ ನೇರ ಅಪಾಯ ತಂದೊಡ್ಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇನ್ನು CDSCO ವರದಿಯಲ್ಲಿ ಉಲ್ಲೇಖಿಸಲಾದ ಕೆಲವು ಪ್ರಮುಖ ಔಷಧಿಗಳು ಹೀಗಿವೆ:
- ಟ್ಯಾಮೋಕ್ಸಿಫೆನ್ ಟ್ಯಾಬ್ಲೆಟ್ IP
- ರೇಬ್‌ಪ್ರಜೋಲ್ ಸೋಡಿಯಂ ಇಂಜೆಕ್ಷನ್ IP
- ಪ್ಯಾಂಟೋಪ್ರಜೋಲ್ ಟ್ಯಾಬ್ಲೆಟ್ IP
- ಡಿಕ್ಲೋಫೆನಾಕ್ ಸೋಡಿಯಂ ಟ್ಯಾಬ್ಲೆಟ್
- ಫಾಲಿಕ್ ಆ್ಯಸಿಡ್ ಟ್ಯಾಬ್ಲೆಟ್
- ಅಮೊಕ್ಸಿಸಿಲಿನ್ ಮತ್ತು ಪೊಟ್ಯಾಸಿಯಂ ಕ್ಲಾವುಲಾನೇಟ್ ಟ್ಯಾಬ್ಲೆಟ್ IP
- ಕ್ಯಾಲಿಕ್ಸಿಯಾ ಕ್ಯಾಲ್ಸಿಯಂ ಕಾರ್ಬೋನೇಟ್ 500 ಎಂ.ಜಿ.
- ಅಲ್‌ಬೆಂಡಜೋಲ್ ಟ್ಯಾಬ್ಲೆಟ್ IP.
ಈ ಪೈಕಿ ಕೆಲವು ಔಷಧಿಗಳ ನಿರ್ದಿಷ್ಟ ಬ್ಯಾಚ್(Batch)ಗಳು ಮಾತ್ರ ಕಳಪೆ ಎಂದು ವರದಿ ಹೇಳಿದೆ. ಅಂದರೆ, ಎಲ್ಲಾ ಉತ್ಪಾದನೆ ಅಲ್ಲ, ಆದರೆ ಕೆಲವು ಬ್ಯಾಚ್‌ಗಳು ನಿಗದಿತ ಪ್ರಮಾಣದ ಗುಣಮಟ್ಟವನ್ನು ಪೂರೈಸಿಲ್ಲ.
ಅಲ್ಲದೆ ಪ್ರಯೋಗಾಲಯ ಪರೀಕ್ಷೆಯ ಫಲಿತಾಂಶದಲ್ಲಿ ಹಿಮಾಚಲ ಪ್ರದೇಶದಲ್ಲಿ ಉತ್ಪಾದನೆಯಾದ 49 ಔಷಧ ಸ್ಯಾಂಪಲ್‌ಗಳು (Sample) ಕಳಪೆಯಾಗಿವೆ ಎಂದು ದೃಢಪಟ್ಟಿದೆ ಇದು ದೇಶದ ಇತರ ರಾಜ್ಯಗಳಿಗಿಂತ ಹೆಚ್ಚು.
ಈ ರಾಜ್ಯದ ಔಷಧ ಕಾರ್ಖಾನೆಗಳು ಪ್ರಮುಖ ಉತ್ಪಾದನಾ ಕೇಂದ್ರಗಳಾಗಿರುವುದರಿಂದ, ಈ ಫಲಿತಾಂಶವು ಔಷಧೋದ್ಯಮಕ್ಕೆ ದೊಡ್ಡ ಹೊಡೆತವಾಗಿದೆ.
ಕೆಮ್ಮು ಮತ್ತು ಶೀತದ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಕೆಯಾಗುವ ಅಂಬ್ರೋಕ್ಸಾಲ್ ಸಿರಪ್ (Ambroxol syrup)ಮಾದರಿಗಳು ಕೂಡಾ ವಿಫಲವಾಗಿವೆ.
ಹಿಮಾಚಲ ಪ್ರದೇಶದ ಸಿರ್ಮೋರ್ ಜಿಲ್ಲೆಯ ಸಾಯಿಟೆಕ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ (Saitech Medicare Private Limited) ಮತ್ತು ಬದ್ದಿಯ ನಕ್ಸ್ಪಾರ್ ಫಾರ್ಮಾ ಪ್ರೈವೇಟ್ ಲಿಮಿಟೆಡ್(Naxpar Pharma Private Limited) ತಯಾರಿಸಿರುವ ಸಿರಪ್‌ಗಳು ಕಳಪೆ ಎಂದು ದೃಢಪಟ್ಟಿವೆ.
ಅದೇ ರೀತಿಯಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿನ ಬಯೋಮೆಡಿಕ್ ಪ್ರೈವೇಟ್ ಲಿಮಿಟೆಡ್ (Biomedic Private Limited)ತಯಾರಿಸಿದ ನೊಸ್ಕಾಪೈನ್ ಸಿರಪ್ (Noscapine syrup)ಮತ್ತು ಛತ್ತೀಸ್ಗಢದ ಬೆಸ್ಟೊ ಕಾಫ್ ಎಂಬ ಸಿರಪ್‌ಗಳು ಸಹ ವಿಷಪೂರಿತವಾಗಿವೆ ಎಂದು ಲ್ಯಾಬ್ ವರದಿ ತಿಳಿಸಿದೆ.
ವಿಶೇಷವೆಂದರೆ, ಬೆಸ್ಟೊ ಕಾಫ್ ತಯಾರಿಸಿದ ಕಂಪನಿ ತಾನು ಆ ಬ್ಯಾಚ್ ಉತ್ಪಾದಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.