ಈ ನ್ಯಾಯಾದೀಶ ಮಲ್ಲಿಕಾರ್ಜುನ ಗೌಡ ಅವರ ಬಳಿ ಇಂದು ದಲಿತ ಸಂಘಟನೆಯ ಕಾರ್ಯಕರ್ತರೊಬ್ಬರು ಮಾತುಕತೆ ಮಾಡಿದ್ದು ಕೇಳಿದೆ. ಇಡೀ ನಾಡು ಅವರ ಕೆಲಸಕ್ಕೆ ಚೀಮಾರಿ ಹಾಕುತ್ತಿದ್ದರೂ, ಅವರೇನೂ ಕದಲಿದಂತೆ ಕಾಣಲಿಲ್ಲ. ನನಗೆ ಒಂದು ಮಾತೂ ಹೇಳದೇ ಪೋಟೋ ಇಟ್ಟಿದ್ದರು. ನಾನಿಲ್ಲಿ ಎಲ್ಲದಕ್ಕೂ ಜವಾಬ್ದಾರಿ. ಅಂಬೇಡ್ಕರ್ ಪೋಟೋ ಇಡಬೇಕು ಎಂದು ಆದೇಶ ಇಲ್ಲ ಎಂದು ಹೇಳುವ ಆ ನ್ಯಾಯಾದೀಶರಿಗೆ ಸರಿ ಹಾಗಾದರೆ ಗಾಂದೀಜಿಯವರ ಪೋಟೋ ಇಡೋದಿಕ್ಕೆ ಎಲ್ಲಿದೆ ಆದೇಶ ಎಂದು ಕೇಳಿದರೆ ಅದು ಪರಂಪರೆಯಲ್ಲಿ ನಡೆದುಕೊಂಡು ಬಂದಿದೆ ಎಂಬ ಹಾರಿಕೆ ಉತ್ತರ.! ಮತ್ತೆ ಅಂಬೇಡ್ಕರ್ ಸಂವಿಧಾನದ ಪಿತಾಮಹ, ನನಗೆ ಗೌರವ ಇದೆ ಎನ್ನುತ್ತಲೇ ತನ್ನದೇನೂ ತಪ್ಪಿಲ್ಲ ಅನ್ನುವಂತೆ ಮಾತಾಡುತ್ತಾನೆ. ಆ ದಲಿತ ಮುಖಂಡ ನಿಜಕ್ಕೂ ಬಹಳ ಪರಿಪರಿಯಾಗಿ ಮನವರಿಕೆ ಮಾಡಲು ಪ್ರಯತ್ನಿಸಿದರೂ ಈ ನ್ಯಾಯಾಧೀಶರಿಗೆ ಅರಿವಾದಂತೆ ಕಾಣಲಿಲ್ಲ.
ಈ ದೇಶದಲ್ಲಿ ಯಾಕಿಂತ ದುರ್ವ್ಯವಸ್ತೆ ಇದೆ ಎಂದು ನಮಗೆ ನಾವೇ ಕೇಳಿಕೊಳ್ಳಬೇಕು. ಕಾನೂನು, ಸಂವಿಧಾನ ಓದಿದವರಿಗೆಲ್ಲಾ ಸಂವಿಧಾನದ ಮೌಲ್ಯಗಳ ಬಗ್ಗೆ ಆಗಲೀ, ಅಂತಹ ಮೌಲ್ಯಗಳ ಹಿಂದೆ ಇರುವ ಅಂಬೇಡ್ಕರ್ ಅವರ ಕಾಳಜಿ, ಶ್ರಮಗಳ ಬಗ್ಗೆ ಕಿಂಚಿತ್ತೂ ಅರಿವಾಗಲೀ ಇರುತ್ತದೆ ಎಂಬುದು ನಮ್ಮ ಬ್ರಮೆ. ಒಬ್ಬ ಸಾಮಾನ್ಯ DSS ಕಾರ್ಯಕರ್ತನಿಗೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಇರುವ ಅರಿವು ಈ ದೇಶದ ನೂರಕ್ಕೆ ತೊಂಬತ್ತೊಂಬತ್ತು ಪಾಲು ನ್ಯಾಯಾದೀಶರು, ವಕೀಲರು ಮತ್ತು ಪತ್ರಕರ್ತರಿಗೆ ಇರಲು ಸಾದ್ಯವಿಲ್ಲ. ಒಬ್ಬ ದಲಿತ ಕಾರ್ಯಕರ್ತರು ಅಂಬೇಡ್ಕರ್ ಅವರು ನಡೆಸಿದ್ದ ನಾಲ್ಕು ಪತ್ರಿಕೆಗಳ ಹೆಸರುಗಳನ್ನು ಸಲೀಸಾಗಿ ಹೇಳಬಲ್ಲ. ಆದರೆ ಬಹುತೇಕ ಪತ್ರಿಕೆಗಳ ಸಂಪಾದಕರುಗಳಿಗೂ ಇದು ಸಾದ್ಯವಾಗುವುದಿಲ್ಲ ಎಂದು ಬೇಕಾದರೆ ಚಾಲೆಂಜ್ ಮಾಡಬಲ್ಲೆ.

ಆಗಸ್ಟ್ 15 ನ್ನು ಸ್ವಾತಂತ್ರ್ಯ ದಿನ ಎಂದು ಕರೆದಂತೆ, ಜನವರಿ 26 ರನ್ನು ಸಂವಿಧಾನ ಜಾರಿಯಾದ ದಿನ ಎಂದು ಕರೆಯದೇ ಗಣರಾಜ್ಯ ದಿನ ಎಂದು ಇಟ್ಟಿರುವುದೇ ದೊಡ್ಡ ಹುನ್ನಾರವೆನಿಸುತ್ತದೆ. ಹಾಗೆಯೇ ಶಾಲಾಕಾಲೇಜುಗಳಿಗೆ ಬೇಸಿಗೆ ರಜೆ ನೀಡುವಾಗ ಏಪ್ರಿಲ್ 14 ರಂದು ಆಚರಿಸಬೇಕಾದ ಅಂಬೇಡ್ಕರ್ ಜಯಂತಿಯವರೆಗೂ ಕಾಯದೇ ಏಪ್ರಿಲ್ 10 ರಂದೇ ರಜೆ ನೀಡುವುದು ಸಹ ಒಂದು ಹುನ್ನಾರವೇ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಜನಸಾಮಾನ್ಯರ ತಿಳಿವಿನಿಂದ ಆದಷ್ಟೂ ದೂರ ಇಟ್ಟುಕೊಂಡು ಬರುವಲ್ಲಿ ಈ ದೇಶದ ‘ಮೇಲ್ಜಾತಿ’ ಬ್ರಾಹ್ಮಣಿಕೆಯ ಹಿತಾಸಕ್ತಿಗಳು ಗೆಲುವು ಪಡೆದಿವೆ.
ಇಲ್ಲಿ ದೊಡ್ಡ ಸಮಸ್ಯೆ ಬ್ರಾಹ್ಮಣಿಕೆಯ ಪ್ರದಾನ ಒಯ್ಯುಗರಾಗಿರುವ ಈ ಶೂದ್ರ ಜಾತಿಗಳ ಜನರದ್ದೇ. ಅಂಬೇಡ್ಕರ್ ಅವರನ್ನು ದೂರ ಇಡುವ ಬ್ರಾಹ್ಮಣರಿಗಾದರೂ ಸ್ಪಷ್ಟತೆಯಿರುತ್ತದೆ. ತಾವು ಯಾಕೆ ದೂರ ಇಟ್ಟಿದ್ದೇವೆ ಎಂದು. ಅಂಬೇಡ್ಕರ್ ಅವರ ಯಾವ ಮಾತುಗಳನ್ನು ಹೇಗೆ ತಿರುಚಿ ಯಾರ ವಿರುದ್ದ ಹೇಗೆ ಎತ್ತಿಕಟ್ಟಬೇಕು ಎಂದು. ಅದರಲ್ಲಿ ಅವರು ನಿಪುಣರೂ ಎಂಬುದು ಹೌದು. ಆದರೆ ಈ ಶೂದ್ರರು ತಮಗೆ ತಾವೇ ಮಾಡಿಕೊಳ್ಳುತ್ತಿರುವ ದ್ರೋಹ ಕಡಿಮೆಯದಲ್ಲ. ಭಾರತದ ಸಂವಿಧಾನದಿಂದ ರಾಜಕೀಯವಾಗಿ ಅತಿ ಹೆಚ್ಚು ಲಾಭ ಪಡೆದುಕೊಂಡವರು ಶೂದ್ರರು. ಸ್ವಾತಂತ್ರ್ಯದ ನಂತರದ ಸಂಸದೀಯ ವ್ಯವಸ್ತೆಯಲ್ಲಿ ಮೀಸಲಾತಿ ಮೂಲಕ ಹೆಚ್ಚು ಬಲಗೊಂಡಿದ್ದು ಶೂದ್ರ ಜಾತಿಗಳು. ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದ ಒಂದಷ್ಟು ಬೂಸುದಾರಣೆಯ ಲಾಬ ಪಡೆದುಕೊಂಡಿದ್ದು, ತಮ್ಮದೇ ಅಂತ ಜಮೀನು ಕಂಡಿದ್ದು ಆ ಮೂಲಕ ಭೂ ಒಡೆಯರಗಲಾಗಿ ಬೂಮಾಲೀಕರ ಹಿಡಿತದಿಂದ ಬಿಡುಗಡೆಗೊಂಡಿದ್ದು ಸಹ ಈ ಶೂದ್ರ ಜಾತಿಗಳ ಜನರೇ. ಇವರಲ್ಲಿ ಮುಖ್ಯವಾಗಿ ವಕ್ಕಲಿಗರು, ಈಡಿಗ, ಬಿಲ್ಲವ, ದೀವರು, ಕುರುಬರು, ದೇವಾಂಗ, ಮಡಿವಾಳ ಮುಂತಾದವರು ಬರುತ್ತಾರೆ.

ಇದೇ ಜಾತಿಗಳ ಕ್ಯಾಟಗರಿ 1, 2a, 2b (Muslims) 3a (ಒಕ್ಕಲಿಗ, ಬಂಟ್ಸ್) 3b (ಲಿಂಗಾಯತ, ವೀರಶಯ್ವ) ಹೀಗೆ ಒಬಿಸಿ ಕ್ಯಾಟಗರಿಗಳ ನೂರಾರು ಜಾತಿಗಳ ಲಕ್ಷಾಂತರ ವಿದ್ಯಾಂತರು ಮೀಸಲಾತಿ ಕೆಳಗೆ ಉದ್ಯೋಗ ಪಡೆದಿದ್ದಾರೆ. ಅದರಲ್ಲಿ IAS, IPS, KAS, KPS, PSI, ನ್ಯಾಯಾದೀಶರು. ಹೀಗೆ ಎಲ್ಲಾ ಹುದ್ದೆಗಳೂ ಬರುತ್ತವೆ. ಯಾರಿಗೊತ್ತು ಸ್ವತಃ ಮಲ್ಲಿಕಾರ್ಜುನ ಗೌಡ ಸಹ ಮೀಸಲಾತಿಯಿಂದಲೇ ನ್ಯಾಯಾದೀಶ ಹುದ್ದೆ ಪಡೆದಿರಬಹುದು. ಆದರೆ ಈ ಎಲ್ಲಾ ಶೂದ್ರ ಜಾತಿಗಳ ವಿದ್ಯಾವಂತರು ತಮಗೆ ಸಂವಿಧಾನದಿಂದ ಮತ್ತು ಅದರ ಹಿಂದಿನ ಶಕ್ತಿಯಾದ ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಇದೆಲ್ಲಾ ತಮಗೆ ದಕ್ಕಿತು ಎಂದು ಯೋಚಿಸುವಷ್ಟೂ ಪ್ರಬುದ್ದತೆ ಪಡೆದಿರುವುದಿಲ್ಲ. ಅಥವಾ ಹಾಗೆ ಅವರು ಯೋಚಿಸದಂತೆ ಮಾಡುವಲ್ಲಿ ನಮ್ಮ ಸಾಮಾಜದ ಮತ್ತು ಸಂಸ್ಕ್ರತಿಯ ಪ್ರಬಾವಳಿಗಳು, ಪೂರ್ವಗ್ರಹಗಳು ಕೆಲಸ ಮಾಡುತ್ತಿವೆ. ಹಾಗಿಲ್ಲವಾದರೆ ಇಂದು ಪ್ರತಿಯೊಂದು ಶೂದ್ರರ ಮನೆಗಳಲ್ಲಿ ತಮ್ಮ ಹಿರೀಕರ ಪೋಟೋಗಳ ಜೊತೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೋ ಸಹ ರಾರಾಜಿಸಬೇಕಿತ್ತು. ಆದರೆ ಶೂದ್ರರ ಪ್ರಜೆಗಳಿಗೆ ಬ್ರಾಹ್ಮಣ್ಯದ ಗರ ಬಡಿದು ಸಮಾಜದ ವಾಸ್ತವ ಸತ್ಯಗಳಿಗೆ ಬೆನ್ನು ಮಾಡುವಂತೆ ಮಾಡಿದೆ.
ಇದೆಲ್ಲಾ ಬದಲಾಗಲು ಇನ್ನೆಷ್ಟು ಯುಗಗಳು ಬೇಕೋ ಏನೋ!
– ಹರ್ಷಕುಮಾರ್ ಕುಗ್ವೆ