ನವದೆಹಲಿ, ಮೇ. 17: ಕೋವಿಡ್–19 ಸೋಂಕು ನಿರೋಧಕವಾಗಿ ಒಂದೇ ಡೋಸ್ ನಲ್ಲಿ ನೀಡಬಹುದಾದ ಲಸಿಕೆಯನ್ನು ಭಾರತದಲ್ಲಿ ಆದಷ್ಟು ಶೀಘ್ರ ಬಿಡುಗಡೆ ಮಾಡಲು ರಷ್ಯಾ ಚಿಂತನೆ ನಡೆಸಿದೆ. ಭಾರತದಲ್ಲಿನ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಸೇವ್ ಈ ವಿವರ ನೀಡಿದ್ದಾರೆ.
ರಷ್ಯಾದಿಂದ ಒಟ್ಟು 60 ಸಾವಿರ ಡೋಸ್ ‘ಸ್ಪುಟ್ನಿಕ್ ವಿ’ ಲಸಿಕೆಯ ಎರಡನೇ ಬ್ಯಾಚ್ ನಿನ್ನೆ ಹೈದರಾಬಾದ್ಗೆ ತಲುಪಿದ ಸಂದರ್ಭದಲ್ಲಿ ಅವರು ಈ ಮಾಹಿತಿ ಪ್ರಕಟಿಸಿದ್ದಾರೆ.
ಅಲ್ಲದೆ, ಭಾರತದಲ್ಲಿ ಇತ್ತೀಚಿಗೆ ಪರಿಚಯಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆಯ ಉತ್ಪಾದನೆಯ ಪ್ರಮಾಣವನ್ನು ವಾರ್ಷಿಕ 850 ಮಿಲಿಯನ್ ಡೋಸ್ಗಳಿಗೆ ಹಂತ ಹಂತವಾಗಿ ಹೆಚ್ಚಿಸುವ ಗುರಿಯಿದೆ ಎಂದೂ ಇದೇ ಸಂದರ್ಭದಲ್ಲಿ ತಿಳಿಸಿದರು.
ಭಾರತದಲ್ಲಿ ‘ಸ್ಪುಟ್ನಿಕ್ ವಿ ಲೈಟ್’ ಹೆಸರಿನ ಲಸಿಕೆಯನ್ನು ಶೀಘ್ರವೇ ಪರಿಚಯಿಸಲಾಗುತ್ತದೆ. ಇದು ಸ್ಪುಟ್ನಿಕ್ ವಿ ಲಸಿಕೆಯ (ಆರ್ಎಡಿ26) ಭಾಗವಾಗಿದೆ’ ಎಂದು ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ಡಿಐಎಫ್) ತಿಳಿಸಿದೆ. ಅದರ ಪ್ರಕಾರ, ‘ಸ್ಪುಟ್ನಿಕ್ ಲೈಟ್‘ ಲಸಿಕೆ ಶೇ 79.4ರಷ್ಟು ಪರಿಣಾಮಕಾರಿ. ರಷ್ಯಾದ ನಾಗರಿಕರಿಗೆ ಒಂದೇ ಡೋಸ್ನಲ್ಲಿ ಲಸಿಕೆ ನೀಡಿದ 28 ದಿನದ ನಂತರ ಸಂಗ್ರಹಿಸಿದ ಅಂಕಿ–ಅಂಶ ಆಧರಿಸಿ ಈ ಫಲಿತಾಂಶ ನೀಡಲಾಗಿದೆ. ಲಸಿಕೆ ಪಡೆದವರಿಗೆ ಸಾಮೂಹಿಕ ಲಸಿಕೆ ಅಭಿಯಾನದಲ್ಲಿ ಡಿಸೆಂಬರ್ 5 ಮತ್ತು ಏಪ್ರಿಲ್ 15ರ ನಡುವೆ ಎರಡನೇ ಡೋಸ್ ಲಸಿಕೆ ನೀಡಲಾಗಿಲ್ಲ’ ಎಂದು ಆರ್ಡಿಐಎಫ್ ವಿವರ ನೀಡಿದೆ.