ಬೆಂಗಳೂರು, ಜ. 08: ರಾಜ್ಯದಲ್ಲಿ ಜ.8ರಂದು ನಡೆಯಲಿರುವ ಕೊರೊನಾ ಲಸಿಕೆ ತಾಲೀಮು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ನಾಳೆ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯಲಿದ್ದು, 24 ಜಿಲ್ಲಾಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳು ಸೇರಿ ರಾಜ್ಯಾದ್ಯಂತ ಒಟ್ಟು 263 ಸ್ಥಳಗಳನ್ನು ಗುರುತಿಸಲಾಗಿದೆ.
ರಾಜ್ಯದಲ್ಲಿ 10 ವಾಕ್-ಇನ್ ಕೂಲರ್, 4 ವಾಕ್-ಇನ್ ಫ್ರೀಜರ್, 3201 ಐಎಲ್ ಆರ್, 3039 ಡೀಪ್ ಫ್ರೀಜರ್, 3312 ಕೋಲ್ಡ್ ಬಾಕ್ಸ್, 46591 ಲಸಿಕೆ ಕ್ಯಾರಿಯರ್, 225749 ಐಸ್ ಪ್ಯಾಕ್ ಲಭ್ಯವಿದೆ. ಕೇಂದ್ರ ಸರ್ಕಾರ 24 ಲಕ್ಷ ಸಿರಿಂಜು, 64 ಐಎಲ್ ಆರ್ ಗಳನ್ನು ಕಳುಹಿಸಿಕೊಟ್ಟಿದ್ದು, 2 ವಾಕ್-ಇನ್ ಕೂಲರ್, 1 ವಾಕ್-ಇನ್ ಫ್ರೀಜರ್ ಒದಗಿಸಲಿದೆ.
ಕೊರೊನಾ ಲಸಿಕೆ ವಿತರಣೆಯಂತಹ ಬೃಹತ್ ಕಾರ್ಯಾಚರಣೆ ಯಶಸ್ವಿಯಾಗಲು ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರ ನಿರ್ಣಾಯಕವಾಗಿದ್ದು, ಇದನ್ನು ಜನಾಂದೋಲನದ ರೀತಿ ಪರಿಗಣಿಸಬೇಕಿದೆ. ಕೊರೊನಾ ಲಸಿಕೆಗೆ ಅನುಮತಿ ನೀಡಲು ಸರ್ಕಾರ ಎಲ್ಲಾ ವೈಜ್ಞಾನಿಕ ಪ್ರಕ್ರಿಯೆಗಳನ್ನು ಪಾಲಿಸಿದ್ದು, ಜನತೆ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.