ನವದೆಹಲಿ, ಮೇ. 07: ದೇಶದಲ್ಲಿ ಕೊರೋನಾ 2ನೇ ಅಲೆಯ ಭೀಕರತೆಯಿಂದ ಬಚಾವ್ ಆಗಲು ಎಲ್ಲರೂ ಶ್ರಮಿಸುತ್ತಿದ್ದಾರೆ. ರಿಲಯನ್ಸ್ ಸಂಸ್ಥೆ ಕೂಡ ಕೊರೋನಾ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದೆ. ಈಗಾಗಲೇ ಲಸಿಕೆ ಅಭಿಯಾನ, ಕೋವಿಡ್ ಕೇರ್ ಸೆಂಟರ್ ನಿರ್ಮಿಸಿರುವ ರಿಲಯನ್ಸ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ದೇಶಕ್ಕೆ ನೆರವಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ಸೋಂಕನ್ನು ಪತ್ತೆ ಹಚ್ಚುವ ಬ್ರೀತ್ ಆಫ್ ಹೆಲ್ತ್ (BHO) ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಲು ಮುಂದಾಗಿದೆ.
ಇದಕ್ಕಾಗಿ ಇಸ್ರೇಲ್ನಿಂದ ತಜ್ಞರ ತಂಡವನ್ನು ಭಾರತಕ್ಕೆ ಕರೆ ತರಲು ಅನುಮತಿಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಕೋವಿಡ್ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆ ವಿಶ್ಚದ ಹಲವು ರಾಷ್ಟ್ರಗಳು ತನ್ನ ನಾಗರಿಕರಿಗೆ ಭಾರತಕ್ಕೆ ತೆರಳದಂತೆ ನಿರ್ಬಂಧವೇರಿದೆ. ಇದರಾಚೆಗೂ ಇಸ್ರೇಲ್ ತಂಡವನ್ನು ಭಾರತಕ್ಕೆ ಕರೆ ತರುವಲ್ಲಿ ರಿಲಯನ್ಸ್ ಸಂಸ್ಥೆ ಯಶಸ್ವಿಯಾಗಿದೆ. ಹೀಗಾಗಲೇ BHOಗೆ ಬೇಕಾದ ಉಪಕರಣಗಳು ಭಾರತವನ್ನು ತಲುಪಿದೆ. ತಜ್ಞರ ತಂಡವೂ ಭಾರತಕ್ಕೆ ವಿಶೇಷ ನಿಯಮದಡಿ ಆಗಮಿಸಲಿದೆ.
ಇಸ್ರೇಲ್ನ ಸಂಸ್ಥೆಯೂ ಈ ತಂತ್ರಜ್ಞಾನವನ್ನು ಭಾರತಕ್ಕೆ ನೀಡುತ್ತಿದೆ. ಈ ಬಗ್ಗೆ ಇಸ್ರೇಲ್ನ ಆರೋಗ್ಯ ಸಚಿವರು ಕಂಪನಿಗೆ ಖುದ್ದು ಭೇಟಿ ನೀಡಿ ಭಾರತಕ್ಕೆ ಬರಲಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿದ್ದಾರೆ. ಇನ್ನು BHO ತಂತ್ರಜ್ಞಾನದಿಂದ ಆರಂಭಿಕ ಹಂತದಲ್ಲೇ ದೇಹದಲ್ಲಿ ಕೊರೋನಾ ವೈರಸ್ ಇರುವುದನ್ನು ಪತ್ತೆ ಹಚ್ಚಬಹುದು. ಇದರಿಂದ ಸೋಂಕು ಹರಡುವಿಕೆಯನ್ನು ಅತ್ಯಂತ ತ್ವರಿತವಾಗಿ ತಡೆಬಹುದಾಗಿದೆ. ಕೋವಿಡ್ ರಿಪೋರ್ಟ್ಗಾಗಿ ದಿನಗಟ್ಟಲೇ ಕಾಯುವ ಬದಲು ಕೆಲವೇ ನಿಮಿಷಗಳನ್ನು ರಿಪೋರ್ಟ್ ಸಿಗಲಿದೆ. ಹೀಗಾಗಲೇ ಇಸ್ರೇಲ್ನಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ರಿಲಯನ್ಸ್ ಸೇರಿದಂತೆ ಭಾರತದ ದೊಡ್ಡ ದೊಡ್ಡ ಉದ್ಯಮಗಳು ಈ ತಂತ್ರಜ್ಞಾನವನ್ನು ಖರೀದಿಸಲಿದ್ದಾರೆ.