- ಮಕ್ಕಳ ಸುರಕ್ಷತೆಯ ಕುರಿತ ಟೀಕೆಗಳ ನಂತರ ಮೆಟಾದ ತೀರ್ಮಾನ
- ಲೈಂಗಿಕ, ಹಿಂಸಾತ್ಮಕ ಮತ್ತು ಮಾದಕ ವಿಷಯಗಳ ವಿರುದ್ಧ ಕಠಿಣ ನಿಯಮ
- PG-13 ಮಾದರಿಯ ಹೊಸ ರೇಟಿಂಗ್ ವ್ಯವಸ್ಥೆ
ಸೋಶಿಯಲ್ ಮೀಡಿಯಾ (Social Media) ವೇದಿಕೆಗಳಲ್ಲಿ ಮಕ್ಕಳ ಸುರಕ್ಷತೆ ಕುರಿತು ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಮೆಟಾ (Meta) ಕಂಪನಿಯು ತನ್ನ ಜನಪ್ರಿಯ ಪ್ಲಾಟ್ಫಾರ್ಮ್ ಇನ್‌ಸ್ಟಾಗ್ರಾಂ (Instagram) ನಲ್ಲಿ ಹದಿಹರೆಯದವರ ರಕ್ಷಣೆಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ. (Instagram new rules for parents)
ಈ ಹೊಸ ಕ್ರಮಗಳು, ಯುವ ಬಳಕೆದಾರರ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮತ್ತು ಅವರ ಆನ್‌ಲೈನ್ ಅನುಭವವನ್ನು ಸುರಕ್ಷಿತವಾಗಿಡುವುದು ಎಂಬ ಮುಖ್ಯ ಉದ್ದೇಶ ಹೊಂದಿವೆ.

ಇತ್ತೀಚಿನ ವರ್ಷಗಳಲ್ಲಿ ಮೆಟಾ ಕಂಪನಿಗೆ (Instagram, Facebook, WhatsApp ಮಾಲೀಕತ್ವದ ಸಂಸ್ಥೆ) ಮಕ್ಕಳ ಮತ್ತು ಹದಿಹರೆಯದವರ ಮೇಲೆ ಸಾಮಾಜಿಕ ಮಾಧ್ಯಮದ ಪರಿಣಾಮದ ಬಗ್ಗೆ ತೀವ್ರ ಟೀಕೆಗಳು ಎದುರಾದವು.
ಅನೇಕ ಪೋಷಕರು, ತಜ್ಞರು ಮತ್ತು ಸಂಶೋಧನಾ ವರದಿಗಳು ಇನ್‌ಸ್ಟಾಗ್ರಾಂನಲ್ಲಿ ಯುವಕರಿಗೆ ತೋರಿಸಲಾಗುವ ಅನಾವಶ್ಯಕ, ಹಿಂಸಾತ್ಮಕ ಅಥವಾ ಅಶ್ಲೀಲ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ ಎಂದು ಸೂಚಿಸಿದ್ದವು. (Instagram new rules for parents)
ಈ ಹಿನ್ನೆಲೆಯಲ್ಲಿ ಮೆಟಾ ಕಂಪನಿಯು ಹೊಸ “ಸೇಫ್ ಕಂಟೆಂಟ್ ಗೈಡ್‌ಲೈನ್ಸ್” (Safe Content Guidelines) ಅನ್ನು ತಯಾರಿಸಿ, ಹದಿಹರೆಯದವರ ಖಾತೆಗಳಿಗೆ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಘೋಷಿಸಿದೆ.
ಇನ್ನು ಇನ್‌ಸ್ಟಾಗ್ರಾಂ ಈಗಿನಿಂದ ಹಾಲಿವುಡ್‌ನ PG-13 ಚಲನಚಿತ್ರ ರೇಟಿಂಗ್ ಮಾದರಿಯನ್ನು ಅನುಸರಿಸಲಿದ್ದು, 13 ವರ್ಷಕ್ಕಿಂತ ಮೇಲ್ಪಟ್ಟವರಿಗಷ್ಟೇ ಸೂಕ್ತವಾದ ವಿಷಯವನ್ನು ತೋರಿಸುತ್ತದೆ.
ಅಂದರೆ, ಹದಿಹರೆಯದವರು ಆಪಾದನೀಯ, ಹಿಂಸಾತ್ಮಕ ಅಥವಾ ನಗ್ನತೆಯ ದೃಶ್ಯಗಳನ್ನು ಒಳಗೊಂಡ ಯಾವುದೇ ಕಂಟೆಂಟ್ ನೋಡಲು ಸಾಧ್ಯವಾಗುವುದಿಲ್ಲ.
ಮೆಟಾ ಕಂಪನಿಯ ಹೇಳಿಕೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಬಳಕೆದಾರರ ಖಾತೆಗಳು ಸ್ವಯಂಚಾಲಿತವಾಗಿ “13+ ಮೋಡ್”ಗೆ ಬದಲಾಗುತ್ತವೆ.
ಈ ಸೆಟ್ಟಿಂಗ್ ಅನ್ನು ಪೋಷಕರ ಅನುಮತಿಯಿಲ್ಲದೆ ಬದಲಾಯಿಸಲು ಯುವಕರು ಸಾಧ್ಯವಿಲ್ಲ. ಇದರಿಂದ ಪೋಷಕರಿಗೆ ಮಕ್ಕಳ ಖಾತೆ ಮೇಲೆ ಹೆಚ್ಚಿನ ನಿಯಂತ್ರಣ ದೊರೆಯಲಿದೆ.
ಅಷ್ಟೇ ಅಲ್ಲದೆ ಇನ್ನು ಮುಂದೆ, ಹೊಸದಾಗಿ ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಬಯಸುವ ಮಕ್ಕಳು ಅಥವಾ ಹದಿಹರೆಯದವರು ತಮ್ಮ ಪೋಷಕರ ಅನುಮತಿಯನ್ನು ಪಡೆಯಲೇಬೇಕು.
ಪೋಷಕರು ತಮ್ಮ ಮಕ್ಕಳ ಖಾತೆಗೆ ಲಾಗಿನ್ ನಿರ್ವಹಣೆ, ಸಮಯ ನಿಯಂತ್ರಣ, ವೀಕ್ಷಣೆಯ ವಿಧ, ಹಾಗೂ ಫಾಲೋ ಮಾಡುವ ಖಾತೆಗಳ ಮೇಲಿನ ನಿಗಾವನ್ನು ಇನ್‌ಸ್ಟಾಗ್ರಾಂ ಪೇರೆಂಟಲ್ ಕಂಟ್ರೋಲ್ (Parental Control) ಆಯ್ಕೆಯ ಮೂಲಕ ನೇರವಾಗಿ ನಿರ್ವಹಿಸಬಹುದು.
ಮೆಟಾ ತಿಳಿಸಿರುವಂತೆ, ಈ ನಿಯಮಗಳು ತೀವ್ರ ಹಿಂಸೆ, ಲೈಂಗಿಕ ನಗ್ನತೆ, ಮಾದಕ ವಸ್ತುಗಳ ಬಳಕೆ, ಅಥವಾ ಅಪಾಯಕಾರಿ ಸಾಹಸಗಳ ಪ್ರಚಾರದಂತಹ ವಿಷಯಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಿವೆ.
ಯುವಕರು ಇಂತಹ ವಿಷಯಗಳಿಂದ ದೂರವಿರುವಂತೆ ಅಲ್ಗೊರಿದಮ್ ತಾನಾಗಿಯೇ ಕ್ರಮ ಕೈಗೊಳ್ಳುತ್ತದೆ.ಮೆಟಾ ಕಂಪನಿ ತನ್ನ ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿರುವಂತೆ, ಈ ಕ್ರಮಗಳು ಕೇವಲ ವಿಷಯ ನಿಯಂತ್ರಣಕ್ಕಷ್ಟೇ ಸೀಮಿತವಲ್ಲ, ಯುವಕರ ಮಾನಸಿಕ ಆರೋಗ್ಯ ಮತ್ತು ಆತ್ಮವಿಶ್ವಾಸ ಕಾಪಾಡುವುದೂ ಮುಖ್ಯ ಉದ್ದೇಶವಾಗಿದೆ.
ಅನೇಕ ಅಧ್ಯಯನಗಳಲ್ಲಿ, ಇನ್‌ಸ್ಟಾಗ್ರಾಂ ಬಳಕೆಯಿಂದ ಕಿಶೋರರು ತಮ್ಮ ಶರೀರದ ಚಿತ್ರಣ (body image) ಬಗ್ಗೆ ಆತ್ಮನಿಂದನೆ ಅಥವಾ ಅಸಮಾಧಾನ ಅನುಭವಿಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು.
ಇನ್‌ಸ್ಟಾಗ್ರಾಂ ಈಗ ಸಕಾರಾತ್ಮಕ ವಿಷಯಗಳನ್ನು ಉತ್ತೇಜಿಸುವ, ಹೋಲಿಕೆ ಮತ್ತು ನಕಾರಾತ್ಮಕ ಭಾವನೆಗಳನ್ನು ತಡೆಯುವ ರೀತಿಯ ಫೀಡ್ ತೋರಿಸಲು ತನ್ನ ಅಲ್ಗೊರಿದಮ್ ಅನ್ನು ಮರು ವಿನ್ಯಾಸಗೊಳಿಸುತ್ತಿದೆ.
ಈ ಹೊಸ ನಿಯಮಗಳು ಪ್ರಾರಂಭಿಕ ಹಂತದಲ್ಲಿ ಅಮೆರಿಕಾ (U.S.), ಯುನೈಟೆಡ್ ಕಿಂಗ್ಡಮ್ (U.K.), ಆಸ್ಟ್ರೇಲಿಯಾ ಹಾಗೂ ಕೆನಡಾ ದೇಶಗಳಲ್ಲಿ ಈಗಾಗಲೇ ಜಾರಿಗೆ ಬಂದಿವೆ.
ಮೆಟಾ ಹೇಳಿಕೆಯ ಪ್ರಕಾರ, ಮುಂದಿನ ವರ್ಷ ಈ ನಿಯಮವನ್ನು ಜಾಗತಿಕವಾಗಿ, ಅಂದರೆ ಭಾರತ ಸೇರಿದಂತೆ ಎಲ್ಲ ದೇಶಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು.