ರಾಜಸ್ಥಾನದ ಜೋಧಪುರದಲ್ಲಿ ಪ್ರತಿವರ್ಷ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ನಡೆಯುತ್ತದೆ. ಈ ಬಾರಿ ಸ್ಪರ್ಧಾ ವಿಭಾಗದಲ್ಲಿದ್ದಂಥ ಕನ್ನಡದ ಚಿತ್ರವೊಂದಕ್ಕೆ ಶುಭ ಸಮಾಚಾರ ದೊರಕಿದೆ. ಹೌದು, ‘ದಾರಿ ಯಾವುದಯ್ಯಾ ವೈಕುಂಠಕೆ’ ಸಿನಿಮಾ ಉತ್ತಮ ಕತೆಗಾಗಿ ಪ್ರಶಸ್ತಿ ಪಡೆದುಕೊಂಡಿದೆ.
ಜೋಧಪುರದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿಯೂ ಎಂದಿನಂತೆ ಹಲವಾರು ದೇಶ ವಿದೇಶಗಳಿಂದ ಚಿತ್ರಗಳು ಆಗಮಿಸಿದ್ದವು. ಸಿನಿಮಾ ಪ್ರದರ್ಶನದ ಜೊತೆಗೆ ಸ್ಪರ್ಧೆಗೆಂದು ಬಂದ ಚಿತ್ರಗಳಿಗೂ ಕೊರತೆ ಇರಲಿಲ್ಲ. ಈ ಸಂದರ್ಭದಲ್ಲಿ ಕನ್ನಡದ ದಾರಿ ಯಾವುದಯ್ಯಾ ವೈಕುಂಠಕೆ ಚಿತ್ರವು ಪ್ರದರ್ಶನ ಕಂಡು ಎಲ್ಲರಿಂದ ಉತ್ತಮ ಮೆಚ್ಚುಗೆ ಗಳಿಸಿದೆ. ಅಂತಿಮ ಹಂತದಲ್ಲಿ ಉತ್ತಮ ಕಥೆಗಾಗಿ ನೀಡುವ ಪ್ರಶಸ್ತಿ ಈ ಚಿತ್ರದ ಪಾಲಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಸಿದ್ದು ಪೂರ್ಣಚಂದ್ರರ ಈ ಚಿತ್ರವು ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡು 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅದರಲ್ಲಿ ನಾಲ್ಕು ಕಡೆ “ಬೆಸ್ಟ್ ಡೈರೆಕ್ಟರ್” ಅವಾರ್ಡ್ ಬಂದಿದೆ. ಬಿಡುಗಡೆಗೂ ಮುನ್ನ ಎಲ್ಲಾ ಕಡೆ ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ. `ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನ’ದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸಿದ್ದಾರೆ.
ವರ್ಧನ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನುಷ, ‘ತಿಥಿ’ ಖ್ಯಾತಿಯ ಪೂಜಾ, ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ , ಅರುಣ್ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್, ಸುಚಿತ್, ಮೈಸೂರು ಬಸವರಾಜ್ ಮೊದಲಾದವರು ನಟಿಸಿದ್ದಾರೆ. ಲೋಕಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.