ಆತ್ಮೀಯ ಸ್ನೇಹಿತರೆ ಮಾರ್ಚ್ 08(March 08th) ಮಾತ್ರ ಮಹಿಳಾ ದಿನಾಚರಣೆ(International Women’s Day) ಸೀಮಿತವಾಗದಿರಲಿ. ಇಂದು ಮಹಿಳಾ ದಿನದ ಅಂಗವಾಗಿ ನನ್ನ ಜೀವನದಲ್ಲಿ ನಾ ಕಂಡ ವಿಶೇಷ ಹೆಣ್ಣಿನ ಕುರಿತು ಇಲ್ಲಿ ಹೇಳಲು ಹೊರಟಿರುವೆ. ಆ ಅನುಭವವೇ ಸುಂದರ, ಸುಮಧುರ. ಪ್ರತಿದಿನ, ಪ್ರತಿಕ್ಷಣ ಹೆಣ್ಣಿಗೆ ಗೌರವ ನೀಡೋಣ. ನನ್ನ ಹುಟ್ಟು, ಗ್ರಾಮೀಣ ಭಾಗದ್ದು, ಅಲ್ಲಿ ನಾ ಕಂಡದ್ದು ಅಪ್ಪನಿಗಿಂತ ಅಮ್ಮನೇ ಶಕ್ತಿಶಾಲಿ ಎಂಬುದು. ಕೋಳಿ ಕೂಗುವ ಮುನ್ನ ಎದ್ದು ಅಂಗಳ ಗುಡಿಸಿ, ಚೆಂದದ ರಂಗೋಲಿ ಬಿಟ್ಟು ಹೊಸ್ತಿಲಿಗೆ ಅರಿಶಿಣ ಕುಂಕುಮ, ತಾಜಾ ಹೂ ಇಟ್ಟು.

ಕೊಟ್ಟಿಗೆಯ ದನಗಳನ್ನು ಹೊರಗೆ ಕಟ್ಟಿ, ಹಾಲನ್ನು ಹಿಂಡಿ, ಅದನ್ನು ಮಾರಿ ಬಂದು ಶಾಲೆಗೆ ಸಿದ್ಧರಾಗಿ ಎಂದು ಕೂಗುತ್ತಿದ್ದಳು. ಮತ್ತೆ ಅಡುಗೆ ಮನೆಯೆಂಬ ಕಾರ್ಖಾನೆಯ ಹೊಕ್ಕು ನಿರತಳಾಗುತ್ತಿದ್ದಳು. ಚಹಾ, ತಿಂಡಿ, ಮಧ್ಯಾಹ್ನದ ಉಪಾಹಾರ, ನಮ್ಮ ಶಾಲೆಯ ಸಿದ್ಧತೆ, ಅವಳ ಗಡಿಬಿಡಿಯ ಕೆಲಸದ ಮಧ್ಯೆ ಏನಾದರೂ ಕೇಳಿದರೆ ಮಾತೇ ಚಾಮುಂಡಿಯ ದರ್ಶನ! ಎಲ್ಲರೂ ತಿನ್ನುವಾಗ ಕೊಂಚ ತಿಂದು ಮತ್ತೆ ತೋಟದ ಕಡೆಗೆ ಅವಳ ನಡಿಗೆ, ಮಳೆ ಬಿಸಿಲೆನ್ನದೆ ಹೊಲ ಗದ್ದೆಗಳ ಕಳೆ, ಕೊಯ್ಲು , ಗೊಬ್ಬರ, ದನಕರುಗಳಿಗೆ ಮೇವು. ಪಡುವಣದಲ್ಲಿ ಸೂರ್ಯಾಸ್ತವಾದ ನಂತರವೇ ಅವಳದ್ದು ಮನೆಯ ಕಡೆಗೆ ಹೆಜ್ಜೆ.

ಸಂಜೆಯಾದರೂ ನೆಮ್ಮದಿಯಿಲ್ಲ ಅವಳಿಗೆ. ಮತ್ತದೇ ಅಂಗಳ ಹಸು, ಕರು ಹಾಲು ಎಲ್ಲರಿಗೂ ಊಟ. ತಿಂದ ತಟ್ಟೆ ತೊಳೆಯುವ ಹೊತ್ತಿಗೆ ಗಂಟೆ ಹತ್ತು! ತದನಂತರ ನಿದ್ರೆಯಲ್ಲಿ ಮಾತ್ರ ಅವಳಿಗೆ ನೆಮ್ಮದಿ. ಅದೂ ಸಹ ಮತ್ತೆ ಬೆಳಕು ಹರಿಯುವವರೆಗೆ ಮಾತ್ರ. ತಾಯೆ ನೀನೆಂದರೆ ಬೆಟ್ಟದಷ್ಟು ಪ್ರೀತಿ, ಗೌರವ, ಎಲ್ಲವನ್ನೂ ನಿಂತು ನಿನ್ನ ಮುಂದೆ ಹೇಳಲಾರೆ. ನನ್ನೆಲ್ಲಾ ಚಿಕ್ಕ, ಪುಟ್ಟ ತಪ್ಪುಗಳನ್ನು ಕ್ಷಮಿಸು. ಬಿಡುವಿಲ್ಲದೆ, ಕೂಲಿ ಕೇಳದೆ, ಕೆಲಸಕ್ಕೆ ನಿಗದಿತ ಸಮಯವೆನ್ನದೇ ಬಂದು ಹೋಗುವ ಬಂಧು ಮಿತ್ರರನ್ನೆಲ್ಲಾ ಆಧರಿಸುವಳು ಲೋಕದಲ್ಲಿ ಮತ್ಯಾರಿಲ್ಲ ಕರುಣಾಮಯಿ ಸ್ತ್ರೀಯೊಬ್ಬಳೇ. ಮತ್ತೊಮ್ಮೆ ಮಹಿಳಾ ದಿನಾಚರಣೆಯ ಶುಭಾಶಯಗಳು.
- ಸೌಮ್ಯ