ಚೆನ್ನೈ, ಏ. 14: ಆರಂಭಗೊಂಡ ಮೊದಲ ವಾರದಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ಐಪಿಎಲ್ 14ನೇ ಆವೃತ್ತಿಯಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸರ್‌ರೈಸರ್ಸ್ ಹೈದ್ರಾಬಾದ್ ತಂಡಗಳು ಹೈವೋಲ್ಟೇಜ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಸೀಸನ್‌ನ ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ಮುಂಬೈ ವಿರುದ್ಧ ವಿರೋಚಿತ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗೆಲುವಿನ ಉತ್ಸಾಹದೊಂದಿಗೆ ಇಂದಿನ ಪಂದ್ಯಕ್ಕೆ ಸಜ್ಜಾಗಿದ್ದರೆ. ಮತ್ತೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸಿರುವ ಹೈದ್ರಾಬಾದ್, ಇಂದಿನ ಪಂದ್ಯದಲ್ಲಿ ಗೆದ್ದು, ಜಯದ ಹಾದಿ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಎರಡೂ ತಂಡಗಳು, ತಮ್ಮದೇ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜಾಗಿವೆ. ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲದಿಂದ ಕೂಡಿದ್ದರೂ, ವಿರಾಟ್ ಕೋಹ್ಲಿ ನಾಯಕತ್ವದ ಬೆಂಗಳೂರು, ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಹಾಟ್ ಫೇವರೆಟ್ ಎನಿಸಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಆಟಗಾರರನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್, ಮೊದಲ ಪಂದ್ಯದಲ್ಲಿ ಮಾಡಿಕೊಂಡ ತಪ್ಪು ಮರುಕಳಿಸದಂತೆ ಎಚ್ಚರಿಕೆವಹಿಸಬೇಕಿದೆ. ಇದಕ್ಕಾಗಿ ತಂಡದ ಆಟಗಾರರ ಆಯ್ಕೆ ಬಹುಮುಖ್ಯವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿದೆ.
ಮತ್ತೊಂದೆಡೆ ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಬೌಲಿಂಗ್ ವಿಭಾಗದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದರೂ, ಇಂದಿನ ಪಂದ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ.
ಮೊದಲ ಪಂದ್ಯದಲ್ಲಿ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೈಚಲ್ಲಿದ ಸನ್‌ರೈಸರ್ಸ್ ಹೈದ್ರಾಬಾದ್, ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಸುಧಾರಿಸಬೇಕಿದೆ. ನಾಯಕ ವಾರ್ನರ್ ಸೇರಿದಂತೆ ಹಲವು ಬ್ಯಾಟ್ಸಮನ್‌ಗಳು ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಹೀಗಾಗಿ ಗೆಲುವಿನ ಹಾದಿಗೆ ಮರಳಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡ ಹೈದ್ರಾಬಾದ್ ತಂಡಕ್ಕಿದೆ.
ಹೀಗಾಗಿ ಉಭಯ ತಂಡಗಳ ನಡುವಿನ ಇಂದಿನ ಪಂದ್ಯ ಎರಡೂ ತಂಡಗಳ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡಲಿದ್ದು, ಈ ಬಲಿಷ್ಠ ತಂಡಗಳ ಮುಖಾಮುಖಿ ವೀಕ್ಷಿಸಲು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಪಂದ್ಯದ ಸಮಯ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್